ದಾವಣಗೆರೆ.ಫೆ.23; ದುರ್ಗಾಂಬಿಕಾ ದೇವಿ ಜಾತ್ರೆ ಸಮೀಪಿಸುತ್ತಿದ್ದು ಜನರಿಗೆ ತೊಂದರೆಯಾಗದಂತೆ ಅಗತ್ಯವಾದ ಸೌಲಭ್ಯಗಳನ್ನು ಮೂರು ದಿನದೊಳಗೆ ಕಲ್ಪಿಸಬೇಕು ಎಂದು ಮೇಯರ್ ಬಿ.ಜೆ.ಅಜಯ್ ಕುಮಾರ್ ಹೇಳಿದರು.
ದಾವಣಗೆರೆ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ನೆನ್ನೆ ನಡೆದ ಸದಸ್ಯರು ಹಾಗೂ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಅವರು ಮಾತನಾಡಿದರು.
ನಗರದೇವತೆ ಹಬ್ಬ ಇದಾಗಿದ್ದು, ಜನರಿಗೆ ತೊಂದರೆಯಾಗದಂತೆ ಜಾಗ್ರತೆ ವಹಿಸಬೇಕು. ಹಬ್ಬದ ದಿನಗಳಲ್ಲಿ ಅಂದರೆ ಮಾರ್ಚ್ 1, 3, 4 ಹಾಗೂ 5ರಂದು ನಿರಂತರವಾಗಿ ಕುಡಿಯುವ ನೀರು ಪೂರೈಸಿ ಎಂದು ಹೇಳಿದರು. ಯಾರೇ ಆಗಲಿ ಕೆಲಸ ಮಾಡದಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಹಬ್ಬ ನಡೆಯುವ ದಿನಗಳಲ್ಲಿ 10 ದಿವಸ ನಿರಂತರವಾಗಿ ವಿದ್ಯುತ್ ಕಲ್ಪಿಸಬೇಕು. ಅಲ್ಲದೇ ಬಡವರಿಗೂ ಟ್ಯಾಂಕರ್ ನಲ್ಲಿ ನೀರು ಒದಗಿಸಬೇಕು. ಹಬ್ಬದ ದಿವಸ ಪಾಸ್ ವಿತರಿಸುವ ಸಂಬಂಧ ದೇವಸ್ಥಾನ ಸಮಿತಿಯವರ ಜೊತೆ ಚರ್ಚಿಸಿ ಪಾಸ್ ನೀಡುವ ವ್ಯವಸ್ಥೆ ಮಾಡಲಾಗುವುದು. ದೇವಸ್ಥಾನಗಳೂ ಸೇರಿದಂತೆ ಮಸೀದಿಗಳಿಗೂ ಬಣ್ಣ ಬಳಿಸಬೇಕು. ಬೀದಿದೀಪ, ಮುಖ್ಯವಾಗಿ ನಗರದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸದಸ್ಯರು ಹಾಗೂ ಅಧಿಕಾರಿಗಳು ಗಮನಹರಿಸಿದರೆ ಉತ್ತಮ ಎಂದರು.
ದೇವಸ್ಥಾನಕ್ಕೆ ಹೋಗುವ ಮಾರ್ಗವನ್ನು ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಿದರೆ ಜನರನ್ನು ನಿಯಂತ್ರಿಸಬಹುದು. ಬಿಡಾಡಿದನಗಳು, ಹಂದಿ, ನಾಯಿಗಳ ಹಾವಳಿ ನಗರದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ ಈ ಬಗ್ಗೆ ಹಲವಾರು ದೂರುಗಳು ಬರುತ್ತಿವೆ ಆದ್ದರಿಂದ ಮುಂದಿನ ದಿನಗಳಲ್ಲಿ ಸಾಮಾನ್ಯ ಸಭೆ ಕರೆದು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದೆಂದರು.
ಸಭೆಯಲ್ಲಿ ಉಪಮೇಯರ್ ಸೌಮ್ಯಾ, ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ ಹಾಗೂ ಸದಸ್ಯರು ಇದ್ದರು.
Designed, Developed and Maintained by PRABHAT SERVICES ™  , AJEYA KANNADA DAILY 2019 ©