Wednesday 28 October 2020  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ಸೆ.25ರಂದು ರಕ್ತಕ್ರಾಂತಿ ಮುಖಾಂತರ ಪ್ರತಿಭಟನೆ

ಹೊರಗುತ್ತಿಗೆ ನೌಕರರಿಗೆ ಸಮಾನ ವೇತನ, ಹೊರಗುತ್ತಿಗೆ ರದ್ದುಪಡಿಸಿ 478 ನೌಕರರನ್ನು ಒಳಗುತ್ತಿಗೆ ನೌಕರರನ್ನಾಗಿ ತೆಗೆದುಕೊಳ್ಳಬೇಕೆಂದು ನಡೆಯುತ್ತಿರುವ ಪ್ರತಿಭಟನೆಯ ಹಾಗೂ ಉಪವಾಸ ಸತ್ಯಾಗ್ರಹ ನಡೆಯುತ್ತಿದ್ದರೂ ಯಾರೂ ಕೇಳಲು ಬರುತ್ತಿಲ್ಲ.

2020-09-24 05:30:00, ajeyanews.com

Ajeya Imageಶಿವಮೊಗ್ಗ, ಸೆ.24: ಸಿಮ್ಸ್ ಎದುರು ಹೊರಗುತ್ತಿಗೆ ನೌಕರರು ಕಳೆದ 4 ದಿನಗಳಿಂದ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರದ 5ನೇ ದಿನವಾದ ನಾಳೆ ರಕ್ತಕ್ರಾಂತಿ ಮೂಲಕ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ವಿದ್ಯಾರ್ಥಿ ಸಂಘಟನೆಯ ರಾಜ್ಯಾಧ್ಯಕ್ಷ ವಿನಯ್ ರಾಜಾವತ್ ತಿಳಿಸಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿಭಟನೆಗೆ ನಾಳೆ ಡೆಡ್ ಲೈನ್ ಆಗಲಿದ್ದು ನಾಳೆ ನಡೆಯುವ ಪ್ರತಿಭಟನೆಗೆ ಸರ್ಕಾರ ಬಗ್ಗದಿದ್ದರೆ ಶನಿವಾರ ನಡೆಯುವ ಅನಾಹುತಗಳಿಗೆ ಜಿಲ್ಲೆಯ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಸಾಂಸದ ಬಿ.ವೈ.ರಾಘವೇಂದ್ರ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಹೊಣೆಯಾಗುತ್ತಾರೆ ಎಂದು ಎಚ್ಚರಿಸಿದರು.

ಹೊರಗುತ್ತಿಗೆ ನೌಕರರಿಗೆ ಸಮಾನ ವೇತನ, ಹೊರಗುತ್ತಿಗೆ ರದ್ದುಪಡಿಸಿ 478 ನೌಕರರನ್ನು ಒಳಗುತ್ತಿಗೆ ನೌಕರರನ್ನಾಗಿ ತೆಗೆದುಕೊಳ್ಳಬೇಕೆಂದು ನಡೆಯುತ್ತಿರುವ ಪ್ರತಿಭಟನೆಯ ಹಾಗೂ ಉಪವಾಸ ಸತ್ಯಾಗ್ರಹ ನಡೆಯುತ್ತಿದ್ದರೂ ಯಾರೂ ಕೇಳಲು ಬರುತ್ತಿಲ್ಲ. ಶಾಂತಿಯುತ ಹೋರಾಟಕ್ಕೆ ಯಾರೂ ಸ್ಪಂದಿಸಿಲ್ಲ. ಮೆಗ್ಗಾನ್ ಆಸ್ಪತ್ರೆ ವಾತಾವರಣ ಗಬ್ಬು ನಾರುತ್ತಿದೆ. ನಿಜವಾಗಿ ಕೊರೋನಾ ವಾರಿಯರ್ಸ್ ಗಳಾಗಿ ಸಿಮ್ಸ್ ನಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುವವರಿಗೆ ಯಾವುದೇ ಸೌಲಭ್ಯವಿಲ್ಲದೇ ಸುಳ್ಳು ಭರವಸೆ ಮತ್ತು ಆಶ್ವಾಸನೆ ನೀಡುತ್ತಾ ಜನಪ್ರತಿನಿಧಿಗಳು ವಂಚಿಸಿದ್ದಾರೆ. ಮಹಾನಗರಪಾಲಿಕೆ ಹಾಗೂ ರಾಜ್ಯದ ಹಲವು ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಕಾನೂನುಬದ್ದವಾಗಿ ಹೊರಗುತ್ತಿಗೆ ನೌಕರರನ್ನು ಒಳಗುತ್ತಿಗೆಗೆ ಪಡೆದು ವೇತನ ನೀಡಲಾಗಿದೆ. ವೈದ್ಯರಿಗೂ ವೇತನ ಹೆಚ್ಚಿಸಲಾಗಿದೆ. ಆದರೆ ನಿಜವಾಗಿ ಕೊರೋನಾ ವಾರಿಯರ್ಸ್ ಗಳಾಗಿ ತಮ್ಮ ಪ್ರಾಣದ ಹಂಗು ತೊರೆದು ಮಲಮೂತ್ರ ಸ್ವಚ್ಛಗೊಳಿಸುವ ಕಾರ್ಮಿಕರನ್ನು ಕಡೆಗಣಿಸಿದ್ದು, ಕೇವಲ 10,800 ರೂ.ಗಳಿಗೆ 478 ಹೊರಗುತ್ತಿಗೆ ಸಿಬ್ಬಂದಿಗಳನ್ನು ದುಡಿಸಿಕೊಳ್ಳಲಾಗುತ್ತಿದೆ ಎಂದು ದೂರಿದರು.

ಹಾಗಾಗಿ ನಾಳೆ ಸಿಮ್ಸ್ ಎದುರು ರಕ್ತಕ್ರಾಂತಿ ಚಳುವಳಿ ನಡೆಸಲು ತೀರ್ಮಾನಿಸಿದ್ದು, ನಾಳೆಯೂ ಸರ್ಕಾರ ಅಧಿವೇಶನದಲ್ಲಿ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿ ಸಕಾರಾತ್ಮಕ ತೀರ್ಮಾನ ತೆಗೆದುಕೊಳ್ಳದಿದ್ದರೆ ಶನಿವಾರದಿಂದ ಪ್ರತಿಭಟನೆ ಉಗ್ರ ಸ್ವರೂಪ ತಳೆಯಲಿದೆ ಎಂದರು.

ಚೌಡೇಶ್ವರಿ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ರಾಮಣ್ಣ, ಖಜಾಂಚಿ ನರಸಿಂಹ, ಶಾಂತಮ್ಮ, ವೆಂಕಟೇಶ್, ಸಲೀಮ್ ಇನ್ನಿತರರಿದ್ದರು.


ಪದಗಂಟು :          
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©