Wednesday 28 October 2020  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಭೀಮ್ ಸುದ್ದಿ

ಶಿವಮೊಗ್ಗದಲ್ಲಿ ಕೋವಿಡ್ ರೋಗಿಗಳಿಗೆ ಗ್ರಂಥಾಲಯ

ಇಂತಹ ಕೋವಿಡ್ ಗ್ರಂಥಾಲಯ ರಾಜ್ಯದಲ್ಲಿಯೇ ಪ್ರಥಮವಾಗಿದೆ. ಇದನ್ನು ಸ್ಥಾಪಿಸಲು ಸಾಗರ ಶಾಸಕ ಹರತಾಳು ಹಾಲಪ್ಪ ಸಹಕಾರ ನೀಡಿದ್ದು, ಹಾಗೂ ರವೀಂದ್ರ ಪುಸ್ತಕಾಲಯದ ಉಚಿತ ಪುಸ್ತಕಗಳ ಕೊಡುಗೆಯನ್ನು ಬಳಸಿಕೊಳ್ಳಲಾಗಿದೆ.

2020-10-07 05:30:00, ajeyanews.com

Ajeya Imageಶಿವಮೊಗ್ಗ, ಅ.7:
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೋಂಕಿತರ ಏಕಾಂಗಿತನವನ್ನು ದೂರ ಮಾಡಲು ಮತ್ತು ಅವರಲ್ಲಿ ಆತ್ಮವಿಶ್ವಾಸ ತುಂಬಲು, ಜ್ಞಾನವನ್ನು ಹೆಚ್ಚಿಸುವ ದೃಷ್ಟಿಯಿಂದ ಆರೋಗ್ಯ ಇಲಾಖೆ ಅಧಿಕಾರಿ ಮತ್ತು ನೌಕರರ ಸಂಘವು ಮೆಗ್ಗಾನ್ ಆಸ್ಪತ್ರೆಯಲ್ಲಿ ಅ.9 ರಂದು ಬೆಳಿಗ್ಗೆ 11 ಗಂಟೆಗೆ ಕೋವಿಡ್ ಗ್ರಂಥಾಲಯವನ್ನು ತೆರೆಯಲಿದೆ. 

ಇಂದು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖಾ ಅಧಿಕಾರಿಗಳು ಮತ್ತು ನೌಕರರ ಸಂಘದ ಜಿಲ್ಲಾಧ್ಯಕ್ಷ ಮ.ಸ. ನಂಜುಂಡಸ್ವಾಮಿ ಬೇರೆಲ್ಲ ರೋಗಗಳಿಗಿಂತ ಕೋವಿಡ್-19 ಒಂದು ಆತಂಕದ ಕಾಯಿಲೆಯಾಗಿದೆ. ಸೋಂಕಿತರು ಆಸ್ಪತ್ರೆಗೆ ಸೇರಿದರೂ ಕೂಡ ಅವರ ನೆಂಟರು, ಆಪ್ತರು, ಗೆಳೆಯರು ಅವರನ್ನು ನೋಡಲು ಹಿಂದೇಟು ಹಾಕುತ್ತಾರೆ. ಬಹುಪಾಲು ರೋಗಿಗಳು ಆತ್ಮವಿಶ್ವಾಸವನ್ನೇ ಕಳೆದುಕೊಳ್ಳುತ್ತಾರೆ. ಭಯದಿಂದಲೇ ಅನೇಕರು ಸಾವು ಕಂಡಿದ್ದಾರೆ ಎನ್ನಲಾಗುತ್ತಿದೆ. ಇವರ ನೆರವಿಗೆ ಪುಸ್ತಕಗಳಾದರೂ ಇರಲಿ ಎಂಬ ದೃಷ್ಟಿಯಿಂದ ಈ ಗ್ರಂಥಾಲಯ ಆರಂಭಿಸಲಾಗುತ್ತಿದೆ ಎಂದರು.

ಇಂತಹ ಕೋವಿಡ್ ಗ್ರಂಥಾಲಯ ರಾಜ್ಯದಲ್ಲಿಯೇ ಪ್ರಥಮವಾಗಿದೆ. ಇದನ್ನು ಸ್ಥಾಪಿಸಲು ಸಾಗರ ಶಾಸಕ ಹರತಾಳು ಹಾಲಪ್ಪ ಸಹಕಾರ ನೀಡಿದ್ದು, ಹಾಗೂ ರವೀಂದ್ರ ಪುಸ್ತಕಾಲಯದ ಉಚಿತ ಪುಸ್ತಕಗಳ ಕೊಡುಗೆಯನ್ನು ಬಳಸಿಕೊಳ್ಳಲಾಗಿದೆ. ಉಪವಿಭಾಗಾಧಿಕಾರಿ ಡಾ.ನಾಗರಾಜ್, ಸರ್ಜನ್ ಬೋಂಸ್ಲೆ, ತಾಲೂಕು ವೈದ್ಯಾಧಿಕಾರಿ ಡಾ.ಹೆಚ್.ಎಸ್.ಮೋಹನ್ ಮುಂತಾದವರ ಸಹಕಾರದಲ್ಲಿ ಇದನ್ನು ಸ್ಥಾಪಿಸಲಾಗಿದೆ ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಸಾಹಿತಿ ಡಾ. ಶ್ರೀಕಂಠ ಕೂಡಿಗೆ, ಕಸಾಪದ ಡಿ.ಬಿ. ಶಂಕರಪ್ಪ ಮತ್ತು ಶಿವಮೊಗ್ಗದ ಎಲ್ಲ ಪ್ರಕಾಶಕರು, ಪುಸ್ತಕ ವ್ಯಾಪಾರಿಗಳು ಇದಕ್ಕೆ ಕೈಜೋಡಿಸಲಿದ್ದಾರೆ ಮತ್ತು ಸಾರ್ವಜನಿಕರು, ಸಾಹಿತ್ಯಾಸಕ್ತರು, ಪುಸ್ತಕ ಪ್ರೇಮಿಗಳು ಉತ್ತಮ ಪುಸ್ತಕಗಳನ್ನು ಈ ಗ್ರಂಥಾಲಯಕ್ಕೆ ಉಚಿತವಾಗಿ ನೀಡಬೇಕು. ಆಸಕ್ತರು (ಮೊ:8861169056) ಗೆ ಕರೆ ಮಾಡಿದರೆ ಅವರೇ ಬಂದು ಪುಸ್ತಕ ತೆಗೆದುಕೊಂಡು ಹೋಗುತ್ತಾರೆ.

- ಮ. ಸ. ನಂಜುಂಡಸ್ವಾಮಿ


ಗ್ರಂಥಾಲಯದಲ್ಲಿ ವಿವಿಧ ಮಾದರಿಯ ಸೃಜನಾತ್ಮಕ ಪುಸ್ತಕಗಳು, ಕಾದಂಬರಿ, ಕಥಾ ಸಂಕಲನಗಳು ಇರಲಿವೆ ಮತ್ತು ಪ್ರತಿದಿನದ ಎಲ್ಲ ದಿನಪತ್ರಿಕೆಗಳು, ನಿಯತಕಾಲಿಕೆಗಳು ಇಲ್ಲಿ ಸಿಗಲಿವೆ. ಇದಕ್ಕೆಲ್ಲ ಬಹುಮುಖ್ಯವಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಸಾಂಸದ ಬಿ.ವೈ.ರಾಘವೇಂದ್ರ ಮತ್ತು ಚುನಾಯಿತ ಪ್ರತಿನಿಧಿಗಳು, ಸಿಮ್ಸ್ ಅಧಿಕಾರಿಗಳು, ಇತರೆ ಇಲಾಖೆಗಳ ಅಧಿಕಾರಿಗಳು ಕಾರಣರಾಗಿದ್ದಾರೆ ಅವರೆಲ್ಲರಿಗೂ ನಮ್ಮ ಕೃತಜ್ಞತೆಗಳು ಎಂದರು.

ಸಂಘದ ಗೌರವಾಧ್ಯಕ್ಷ ಡಾ.ಗುಡದಪ್ಪ ಕಸಬಿ, ಕಾರ್ಯಾಧ್ಯಕ್ಷ ವಿ.ಪ್ರಭಾಕರ್, ಕೆ.ನರಸಿಂಹ, ಐ.ಪಿ.ಶಾಂತರಾಜ್, ಗಿರೀಶ್, ಚಂದ್ರಮತಿ ಹೆಗ್ಡೆ, ಪಿ.ಇ.ಬಸವರಾಜಪ್ಪ, ಪ್ರತಿಮಾ ಡಾಕಪ್ಪ ಹೆಗ್ಗಡೆ, ವೈ.ಜೆ.ಶಶಿಕುಮಾರ್ ಸೇರಿದಂತೆ ಹಲವರಿದ್ದರು.


ಪದಗಂಟು :        
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©