ಬೆಂಗಳೂರು, ನ.17:
ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಬಂಧಿಸಲಾಗಿರುವ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ಕುಮಾರ್ ಅವರನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, 2 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಲಾಗಿದೆ.
ಗುರುವಾರಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದ್ದು, ಅಂದು ಸಂಪತ್ ರಾಜ್ ರನ್ನು ಹಾಜರು ಪಡಿಸುವಂತೆ ಸೂಚಿಸಿದೆ. ಸಿಸಿಬಿ 10ದಿನಗಳ ಕಾಲ ಕಸ್ಟಡಿಗೆ ಮನವಿ ಮಾಡಿಕೊಂಡಿತ್ತು.
ಸಂಪತ್ ರಾಜ್ ಬಂಧನದಿಂದ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದ ತನಿಖೆಗೆ ಮಹತ್ವದ ತಿರುವು ಸಿಕ್ಕಂತಾಗಿದೆ. ವಿಚಾರಣೆಯಿಂದ ಹೊರಬರುವ ಮಾಹಿತಿಗಳಿಂದ ಗಲಭೆಗೆ ಕಾರಣ ಯಾರು ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಆರ್ ಟಿ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪತ್ರಾಜ್ ಕೊರೋನಾ ನೆಪವೊಡ್ಡಿ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅಲ್ಲಿಂದ ತಲೆಮರೆಸಿಕೊಂಡಿದ್ದರು. ನಿನ್ನೆ ರಾತ್ರಿ ಅವರನ್ನು ಬಂಧಿಸಲಾಗಿದೆ. ಇಂದು ನ್ಯಾಯಾಲಯದ ಎದುರು ಹಾಜರುಪಡಿಸಲಾಗುತ್ತದೆ. ಅದಾದ ಬಳಿಕ ಹೆಚ್ಚಿನ ತನಿಖೆ ನಡೆಯಲಿದೆ ಎಂದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಬಸವರಾಜ ಬೊಮ್ಮಾಯಿ ಸಮಾಲೋಚನೆ ನಡೆಸಿದರು.
ಯಾವ ಕಾಂಗ್ರೆಸ್ ನಾಯಕರೂ ತಪ್ಪೆಸಗಿಲ್ಲ: ಡಿ.ಕೆ. ಶಿವಕುಮಾರ್
ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ನ ಯಾವ ನಾಯಕರೂ ತಪ್ಪು ಮಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುನರುಚ್ಚರಿಸಿದ್ದಾರೆ.
ವೈಯಕ್ತಿಕ ಹೇಳಿಕೆಗಳನ್ನು ಆಧರಿಸಿ ಯಾರ ಮೇಲೂ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ಕಾನೂನಿನ ಮುಂದೆ ಎಲ್ಲರೂ ಒಂದೇ. ಸಂಪತ್ರಾಜ್ ಆಗಲಿ, ಡಿ.ಕೆ.ಶಿವಕುಮಾರ್ ಆಗಲಿ ಕಾನೂನಿಗೆ ಗೌರವ ಕೊಡಲೇಬೇಕು. ಸದ್ಯಕ್ಕೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ತನಿಖೆ ನಡೆಯಲಿ. ನಂತರ ನಾವು ಮಾತನಾಡುತ್ತೇವೆ. ದೋಷಾರೋಪಣ ಪಟ್ಟಿಯನ್ನು ನಾನು ನೋಡಿದ್ದೇನೆ. ಅದರಲ್ಲಿ ಎಲ್ಲೂ ಕಾಂಗ್ರೆಸ್ ನಾಯಕರ ಹೆಸರಿಲ್ಲ. ಪೊಲೀಸರು ಘಟನೆ ನಡೆದ ಸ್ಥಳದಲ್ಲಿ ಏನು ಮಾಡಿದರು. ಅನಂತರ ಏನೆಲ್ಲಾ ಬೆಳವಣಿಗೆಗಳಾದವು ಎಂಬುದೆಲ್ಲಾ ನನಗೆ ತಿಳಿದಿದೆ ಎಂದು ಹೇಳಿದರು.
(Image
courtesy: Internet) (ಸಾಂದರ್ಭಿಕ
ಚಿತ್ರ)
Designed, Developed and Maintained by PRABHAT SERVICES ™  , AJEYA KANNADA DAILY 2019 ©