ಶಿವಮೊಗ್ಗ, ನ.17:
ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಚುರುಕುಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಸೋಗಾನೆ ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿ.ಎಸ್. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾದ ನಂತರ ವಿಮಾನ ನಿಲ್ದಾಣ ಕಾಮಗಾರಿ ವೇಗ ಪಡೆದುಕೊಂಡಿದೆ. ಇದಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗಿದೆ. ಮೊದಲ ಹಂತದಲ್ಲಿ ರನ್ವೇ, ಸುತ್ತಲು ಕಾಂಪೌಂಡ್ ನಿರ್ಮಾಣ ಸೇರಿದಂತೆ ಅನೇಕ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಫೇಸ್-1ರಲ್ಲಿ ರನ್ವೇಗೆ 149 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕಾಮಗಾರಿ ವೇಗವಾಗಿ ನಡೆಯುತ್ತಿದೆ ಎಂದು ಹೇಳಿದರು.
ಇದೇ ವೇಳೆ ಫೇಸ್-2ನಲ್ಲಿ ಅಗತ್ಯವಾದ ಕಟ್ಟಡಗಳ ನಿರ್ಮಾಣ ಕೂಡ ಆರಂಭವಾಗಲಿದೆ. ಜಿಲ್ಲೆಯ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದು ಆದಷ್ಟು ಬೇಗನೇ ಕಾಮಗಾರಿ ಆರಂಭವಾಗಲಿದೆ. ಟೆಂಡರ್ ಪ್ರಕ್ರಿಯೆ ಮುಗಿದಿದೆ.
ಮೊದಲ ಹಂತದಲ್ಲಿ ಫೇಸ್-1 ಮತ್ತು 2 ಸೇರಿ ಒಟ್ಟು 220ಕೋಟಿ ರೂ. ವೆಚ್ಚದ ಕಾಮಗಾರಿಗಳು ನಡೆಯಲಿವೆ. 2021 ಡಿಸೆಂಬರ್ನಲ್ಲಿ ವಿಮಾನ ಹಾರಾಟಕ್ಕೆ ಅನುಕೂಲವಾಗುವಂತೆ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ. ಎರಡನೇ ಹಂತದ ಕಾಮಗಾರಿ ಕೂಡ 2022ರ ಏಪ್ರಿಲ್ ಒಳಗೆ ಮುಗಿಯಲಿದ್ದು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಇನ್ನೊಂದು ಸುತ್ತಿನ ಮಾತುಕತೆ ನಡೆಸುವುದಾಗಿ ಅವರು ತಿಳಿಸಿದರು.
ಪಿಡಬ್ಲ್ಯೂಡಿ ಮುಖ್ಯ ಅಭಿಯಂತರ ಶಾಂತರಾಜ್, ಕಾರ್ಯಪಾಲಕ ಅಭಿಯಂತರ ಎಂ. ಸಂಪತ್ ಕುಮಾರ್ ಪಿಂಗಳೆ, ಕಾರ್ಯಪಾಲಕ ಅಭಿಯಂತರ ಕಿರಣ್, ಮೇಯರ್, ಉಪ ಮೇಯರ್ ಚನ್ನಬಸಪ್ಪ, ಜ್ಞಾನೇಶ್ವರ್ ಮೊದಲಾದವರು ಇದ್ದರು.
Designed, Developed and Maintained by PRABHAT SERVICES ™  , AJEYA KANNADA DAILY 2019 ©