ಶಿವಮೊಗ್ಗ, ನ.17:
ನಗರದ ಹಲವು ಪದವಿ ಕಾಲೇಜುಗಳು ಪ್ರಾರಂಭವಾಗಿದ್ದು, ಪ್ರಾರಂಭದ ದಿನವಾದ ಇಂದು ಹಾಜರಾತಿ ಅತ್ಯಂತ ಕಡಿಮೆ ಇದೆ. ಸರ್ಕಾರದ ನಿಯಾಮವಳಿಗಳನ್ನು ವಿದ್ಯಾರ್ಥಿಗಳು ಪಾಲಿಸುವಲ್ಲಿ ಹಿನ್ನಡೆ ಕಂಡು ಬಂದಿದೆ.
ಬಹುತೇಕ ವಿದ್ಯಾರ್ಥಿಗಳು ಸರ್ಕಾರದ ನಿಯಮದಂತೆ ಪೋಷಕರ ಒಪ್ಪಿಗೆ ಪತ್ರ ಹಾಗೂ ಕೋವಿಡ್ ಪರೀಕ್ಷಾ ಪ್ರಮಾಣ ಪತ್ರವನ್ನು ತಂದಿರಲಿಲ್ಲ. ನಗರದ ಎ ಟಿ ಎನ್ ಸಿ ಸಿ ಕಾಲೇಜಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪ್ರತಿ ತರಗತಿಯಲ್ಲಿ ಒಂದು ಬೆಂಚಿನಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಿದ್ದು, ಕಾಲೇಜಿನ ಎಲ್ಲಾ ತರಗತಿಗಳನ್ನು ಸ್ಯಾನಿಟೈಜೇಷನ್ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆಯನ್ನು ಮಾಡಲಾಗುತ್ತಿದ್ದು, ಇದಕ್ಕಾಗಿ ಆರೋಗ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆ ವತಿಯಿಂದ ಕ್ರಮಕೈಗೊಳ್ಳಲಾಗಿದೆ. ಈಗಾಗಲೇ ಕಾಲೇಜಿನ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು, ಸರ್ಕಾರ ಆದೇಶದಂತೆ ಎಲ್ಲಾ ಕಾಲೇಜುಗಳಲ್ಲೂ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲಾಗಿದೆ.
ಇಂದು ಹಾಜರಾದ ವಿದ್ಯಾರ್ಥಿಗಳಿಗೆ ಶಿಕ್ಷಕರು ಮತ್ತು ಕಾಲೇಜು ಆಡಳಿತ ಮಂಡಳಿ ಕೋವಿಡ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತೆಗೆದುಕೊಳ್ಳಬೇಕಾದ ಪೂರ್ವಭಾವಿ ಕ್ರಮಗಳ ಬಗ್ಗೆ ಮಾಹಿತಿಯನ್ನು ಕೂಡ ನೀಡಿದರು. ಕೆಲವು ವಿದ್ಯಾರ್ಥಿಗಳು ಕೊರೋನದಿಂದ ಮನೆಯಲ್ಲಿ ಕೂತು ಬೇಸರವಾಗುತ್ತಿತ್ತು, ಕಾಲೇಜು ಇಂದಿನಿಂದ ಪ್ರಾರಂಭವಾಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
Designed, Developed and Maintained by PRABHAT SERVICES ™  , AJEYA KANNADA DAILY 2019 ©