Sunday 13 June 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ವೀರಶೈವ ಲಿಂಗಾಯತ ಸಮುದಾಯಕ್ಕೆ ಒಬಿಸಿ ಮೀಸಲಾತಿ ಕಲ್ಪಿಸಿ

ರಾಜ್ಯದಲ್ಲಿ ಸುಮಾರು 1.5 ಕೋಟಿಗೂ ಹೆಚ್ಚು ವೀರಶೈವ-ಲಿಂಗಾಯತ ಸಮಾಜದವರೇ ಇದ್ದಾರೆ. ಇದರಲ್ಲಿ 86 ಉಪ ಪಂಗಡಗಳಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಆಧಾರಿತ ಕಸುಬುಗಳನ್ನು ಅವಲಂಬಿಸಿದ್ದಾರೆ ಹಾಗೂ ಆರ್ಥಿಕವಾಗಿ ಹಿಂದುಳಿದಿದ್ದಾರೆ.

2020-11-17 05:30:00, ajeyanews.com

Ajeya Imageಶಿವಮೊಗ್ಗ, ನ.17: 
ವೀರಶೈವ-ಲಿಂಗಾಯತ ಅಭಿವೃದ್ದಿ ನಿಗಮ ಸ್ಥಾಪಿಸುವ ಜೊತೆಗೆ ಸಮುದಾಯವನ್ನು ಒಬಿಸಿ ಪಟ್ಟಿಯಲ್ಲಿ ರಾಜ್ಯ ಸರ್ಕಾರ ಸೇರಿಸಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕ ಆಗ್ರಹಿಸಿದೆ.
ವೀರಶೈವ-ಲಿಂಗಾಯತ ಸಮುದಾಯವನ್ನು ಇತರೆ ಹಿಂದುಳಿದವರ ಸಮುದಾಯ (ಒಬಿಸಿ) ಪಟ್ಟಿಯಲ್ಲಿ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಮುನಿ ಎಸ್. ಸಜ್ಜನ್ ಇಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ವೀರಶೈವ-ಲಿಂಗಾಯತ ಧರ್ಮವು ಒಂದು ವಿಶಿಷ್ಟ ಧರ್ಮವಾಗಿದ್ದು, ಸರ್ವಶ್ರೇಷ್ಠ ಹಾಗೂ ಸರ್ವಕಾಲಕ್ಕೂ ಸಲ್ಲುವಂತಹ ಮತ್ತು ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸುವಂತಹ ಉದಾತ್ತವಾದ ಆಶಯಗಳನ್ನು ಹೊಂದಿದೆ ಎಂದರು.
ರಾಜ್ಯದಲ್ಲಿರುವ ಸುಮಾರು ಆರೂವರೆ ಕೋಟಿ ಜನಸಂಖ್ಯೆಯಲ್ಲಿ ಸುಮಾರು 1.5 ಕೋಟಿಗೂ ಹೆಚ್ಚು ವೀರಶೈವ-ಲಿಂಗಾಯತ ಸಮಾಜದವರೇ ಇದ್ದಾರೆ. ಇದರಲ್ಲಿ 86 ಉಪ ಪಂಗಡಗಳಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಆಧಾರಿತ ಕಸುಬುಗಳನ್ನು ಅವಲಂಬಿಸಿದ್ದಾರೆ ಹಾಗೂ ಆರ್ಥಿಕವಾಗಿ ಹಿಂದುಳಿದಿದ್ದಾರೆ. ಸರ್ಕಾರವು ಆರ್ಥಿಕವಾಗಿ ಹಿಂದುಳಿದವರಿಗೆ ನೀಡುತ್ತಿರುವ ಸೌಲಭ್ಯಗಳಿಂದ ನಮ್ಮ ಸಮಾಜದವರು ವಂಚಿತರಾಗುತ್ತಿದ್ದಾರೆ ಎಂದರು.
ಉದ್ಯೋಗ ಕ್ಷೇತ್ರದಲ್ಲೂ ಸಹ ಮೀಸಲಾತಿ ನಮ್ಮ ಜನಸಂಖ್ಯೆಗೆ ಅನುಗುಣವಾಗಿ ಇರದೇ ಇರುವುದರಿಂದ ಈ ಕ್ಷೇತ್ರದಲ್ಲೂ ವಂಚಿತರಾಗುತ್ತಿದ್ದಾರೆ. ದೇಶದ ಎಲ್ಲ ರಾಜ್ಯ ಸರ್ಕಾರಗಳಲ್ಲಿ ನಮ್ಮ ಸಮಾಜವನ್ನು ಹಿಂದುಳಿದ ವರ್ಗದಲ್ಲಿ ಸೇರಿಸಿದ್ದರೂ ಕೂಡ ಕೇಂದ್ರ ಸರ್ಕಾರವು ಹಿಂದುಳಿದ ವರ್ಗದಲ್ಲಿ ಸೇರಿಸದೇ ಇರುವುದು ನಮ್ಮ ಸಮಾಜಕ್ಕೆ ಅನ್ಯಾಯ ಮಾಡಿದೆ ಎಂದರು.
ಜಿಲ್ಲಾ ಘಟಕದ ಪದಾಧಿಕಾರಿಗಳಾದ ಎಂ.ಪಿ.ಆನಂದಮೂರ್ತಿ, ಸಿ.ಮಹೇಶ್ ಮೂರ್ತಿ, ಪಿ.ಎಂ.ರುದ್ರಮುನಿ, ನಂಜಪ್ಪ, ಚಂದ್ರು, ಬಸವನಗೌಡ, ಪಾಲಾಕ್ಷಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪದಗಂಟು :        
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©