ಶಿಕಾರಿಪುರ ಜ.6: ಪಟ್ಟಣದ ರಸ್ತೆ ಹಾಗೂ ಪುರಸಭೆ ವ್ಯಾಪ್ತಿಯಲ್ಲಿರುವ ಅನಧಿಕೃತ ದೇವಸ್ಥಾನಗಳ ತೆರವು ಗೊಳಿಸುವ ಕಾರ್ಯಾಚರಣೆಗಾಗಿ ಪುರಸಭಾ ಸಭಾಂಗಣದಲ್ಲಿ ಅಧ್ಯಕ್ಷೆ ಲಕ್ಷ್ಮೀ ಮಹಾಲಿಂಗಪ್ಪರವರ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ತುರ್ತು ಸಭೆ ನಡೆಸಲಾಯಿತು.
ಮುಖ್ಯಾಧಿಕಾರಿ ಸುರೇಶ್ ವಿಷಯವನ್ನು ಪ್ರಸ್ತಾಪಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸರ್ಕಾರಿ ಸ್ವಾಮ್ಯದಲ್ಲಿರುವ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಮತ್ತು ರಸ್ತೆಗಳಲ್ಲಿ ಜನಸಾಮಾನ್ಯರಿಗೆ, ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ದೇವಸ್ಥಾನಗಳನ್ನು ತೆರವು ಗೊಳಿಸುವ ಆದೇಶವಿದೆ. ಪಟ್ಟಣದ ರಸ್ತೆಯಲ್ಲಿ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಸುಮಾರು 30ಕ್ಕೂ ಅಧಿಕ ಅನಧಿಕೃತ ದೇವಸ್ಥಾನಗಳಿವೆ ಎಂದರು.
ಈ ಪೈಕಿ ಸಾಲೂರು ರಸ್ತೆಯಲ್ಲಿದ್ದ ಮಸೀದಿ, ಕುಮುದ್ವತಿ ನಗರದಲ್ಲಿರುವ ಬಸವಣ್ಣನವರ ದೇವಸ್ಥಾನ, ತಾಲ್ಲೂಕು ಕಛೇರಿ ಎದುರು ಇರುವ ಬಸವಣ್ಣನ ಮೂರ್ತಿಯನ್ನು ಈಗಾಗಲೇ ತೆರವು ಗೊಳಿಸಲಾಗಿದೆ. ಇನ್ನೂ ಪುರಸಭೆ ವ್ಯಾಪ್ತಿಯಲ್ಲಿ ಬರುವ ಅಯ್ಯಪ್ಪ ಸ್ವಾಮಿಯ ದೇವಸ್ಥಾನ, ವಿನಾಯಕ ನಗರದಲ್ಲಿರುವ ಬೀರಲಿಂಗೇಶ್ವರ ದೇವಸ್ಥಾನ, ಹಳೆ ಸಂತೆ ಮೈದಾನದಲ್ಲಿರುವ ಮಾರಿಕಾಂಬಾ ದೇವಸ್ಥಾನ ಹಾಗೂ ದೇವರಾಜ್ ಅರಸು ಬಡಾವಣೆಯ ದುರ್ಗಮ್ಮ ದೇವಸ್ಥಾನದ ತೆರವಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನುಳಿದ 23 ದೇವಸ್ಥಾನಗಳಿಗೆ ಪುರಸಭಾ ಸದಸ್ಯರು ತಮ್ಮ ತಮ್ಮ ವಾರ್ಡಿನಲ್ಲಿ ರಸ್ತೆಯಲ್ಲಿರುವ, ಸಾರ್ವಜನಿಕರಿಗೆ, ವಾಹನ ಸಂಚಾರರಿಗೆ ಅಡಚಣೆಯಾಗುವ ದೇವಸ್ಥಾನಗಳ ತೆರವಿಗೆ ಸಹಕರಿಸಬೇಕು ಎಂದು ಪ್ರಸ್ತಾವನೆ ಸಲ್ಲಿಸಿದರು.
ಇದಕ್ಕೆ ನಾಮನಿರ್ದೇಶಿತ ಪುರಸಭಾ ಸದಸ್ಯ ಟಿ.ಎಸ್. ಮೋಹನ್ ಪಟ್ಟಣದಲ್ಲಿರುವ ಅನೇಕ ದೇವಸ್ಥಾನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿ ಅಭಿವೃದ್ಧಿ ಅಡಚಣೆಯಾಗುವ ದೇವಸ್ಥಾನ ಹಾಗೂ ಮಸೀದಿಗಳ ತೆರವು ಗೊಳಿಸಲಾಗಿದೆ. ಆದರೆ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ರಸ್ತೆಗಳಿಂದ ಸಾರ್ವಜನಿಕರಿಗೆ, ವಾಹನ ಸಂಚಾರರಿಗೆ ಯಾವುದೇ ರೀತಿಯ ಅಡಚಣೆಯಾಗುವ ದೇವಸ್ಥಾನಗಳಿಲ್ಲ. ಹಾಗೇನಾದರೂ ಇದ್ದರೆ ಸಾರ್ವಜನಿಕರೇ ಅದಕ್ಕೆ ಹೊಂದಿಕೊಂಡು ಹೋಗುತ್ತಿದ್ದಾರೆ.ಯಾವುದೇ ದೇವಸ್ಥಾನದ ತೆರವಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಅಗತ್ಯವಿಲ್ಲ ಎಂದು ತಿಳಿಸಿದರು.
ಇದಕ್ಕೆ ಎಲ್ಲಾ ಸದಸ್ಯರೂ ಸಹಮತ ವ್ಯಕ್ತಪಡಿಸಿದರು.
ಪುರಸಭಾ ಅಧ್ಯಕ್ಷೆ ಲಕ್ಷ್ಮೀ ಮಹಾಲಿಂಗಪ್ಪ, ಸದಸ್ಯರಾದ ಪಾಲಾಕ್ಷಪ್ಪ, ಗೋಣಿ ಪ್ರಕಾಶ್,ಉಳ್ಳಿ ದರ್ಶನ್, ಸುನಂದಾ, ರೂಪಕಲಾ ಹೆಗಡೆ, ರೇಖಾಬಾಯಿ, ರೇಣುಕಸ್ವಾಮಿ ಜೀನಳ್ಳಿ ಪ್ರಶಾಂತ್, ರೋಷನ್, ನಾಮಿನಿ ಸದಸ್ಯರಾದ ಗುರುರಾಜ್ ಜಗತಾಪ್, ಬೆಣ್ಣೆ ದೇವೇಂದ್ರಪ್ಪ, ವಿಶ್ವನಾಥ್ ಸೇರಿದಂತೆ ಅನೇಕ ಸದಸ್ಯರು, ಪುರಸಭಾ ಆಡಳಿತ ಮಂಡಳಿಯವರು ಹಾಜರಿದ್ದರು.
Designed, Developed and Maintained by PRABHAT SERVICES ™  , AJEYA KANNADA DAILY 2019 ©