ಶಿವಮೊಗ್ಗ, ಫೆ.18:
ಮೇ.9ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ಸ್ಪರ್ಧಿಸಲಿದ್ದು, ನನ್ನನ್ನು ಗೆಲ್ಲಿಸಬೇಕು ಎಂದು ಶೇಖರಗೌಡ ಮಾಲಿಪಾಟೀಲ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದೆ. ಕನ್ನಡ ನಾಡುನುಡಿಗಾಗಿ ಹೆಚ್ಚು ಕೆಲಸಗಳು ಇಲ್ಲಿ ನಡೆದಿವೆ. ಸುಮಾರು ೨೫ ಅಧ್ಯಕ್ಷರು ಕೆಲಸ ಮಾಡಿದ್ದಾರೆ. ೩ ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ಇನ್ನು ಹತ್ತಾರು ಮಹತ್ವದ ಕೆಲಸಗಳು ಆಗಬೇಕಾಗಿದೆ. ಈ ಹಿನ್ನಲೆಯಲ್ಲಿ ನಾನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ. ಸಮಸ್ತ ಕನ್ನಡಿಗರ ಆಶಯಗಳನ್ನು ನನಸಾಗಿಸಲು ಅಜೀವ ಸದಸ್ಯರಾದ ತಾವು ತಮ್ಮ ಅಮೂಲ್ಯ ಮತಗಳನ್ನು ನೀಡಿ ನನ್ನನ್ನು ಗೆಲ್ಲಿಸಬೇಕು ಎಂದರು.
ತಾವು ಗೆದ್ದರೆ ಎಲ್ಲಾ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣ ಮಾಡುವೆ ಕನ್ನಡ ಶಾಲೆಗಳ ಸ್ಥಾಪನೆ ಮತ್ತು ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಾದರಿ ಕನ್ನಡ ಶಾಲೆ ಸ್ಥಾಪನೆ ಮಾಡುವ ಉದ್ದೇಶವಿದೆ. ರಾಜ್ಯದ 4 ಕಂದಾಯ ವಿಭಾಗಗಳಲ್ಲಿ ಸಾಂಸ್ಕೃತಿಕ ಸಮಾವೇಶ ಆಯೋಜನೆ. ಯುವ ಬರಹಗಾರರ ಕಮ್ಮಟ, ಪುಸ್ತಕ ಸಂತೆ, ಮನೆ ಮನೆಗೆ ಪುಸ್ತಕ, ದಾಸಸಾಹಿತ್ಯ ಪ್ರಚಾರ, ದಲಿತ ಮಕ್ಕಳ ನಾಟಕ ಸಾಹಿತ್ಯಕ್ಕೆ ಒತ್ತು ಮತ್ತು ವಿಶೇಷವಾಗಿ ಪ್ರೌಢಶಾಲೆಯಿಂದ ಸ್ನಾತಕೋತ್ತರ ವಿದ್ಯಾರ್ಥಿ ಗಳಿಗೆ ಹಳೆಗನ್ನಡದ ಓದು ಮತ್ತು ಆಧುನಿಕ ಸಾಹಿತ್ಯದ ಮರು ಓದು ಕುರಿತು ವಿಶೇಷ ಯೋಜನೆಗಳನ್ನು ರೂಪಿಸಿದೆ ಎಂದರು.
ಕನ್ನಡ ಚಳವಳಿ, ರೈತ ಚಳುವಳಿ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮಗಳ ಕನ್ನಡ ಸಂಘಗಳ ಸಮಾವೇಶ ಹಮ್ಮಿಕೊಳ್ಳಲಾಗುವುದು. ವಿಶೇಷವಾಗಿ ಪರಿಷತ್ತಿನ ನಿಬಂಧನೆ 38-ಎ ಮೂಲಕ ಸ್ಥಾಯಿನಿಧಿ ಸ್ಥಾಪನೆ ಮಾಡುವುದು ನನ್ನ ಉದ್ದೇಶವಾಗಿದೆ. ಪರಿಷತ್ತಿನ ಪುಸ್ತಕಗಳನ್ನು ಆನ್ಲೈನ್ ಮಾರಾಟದ ಮೂಲಕ ವ್ಯವಸ್ಥೆ ಮಾಡುವ ಗುರಿಕೂಡ ಹೊಂದಿದ್ದೇನೆ. ಈಗಾಗಲೇ ಕೊಪ್ಪಳ ಜಿಲ್ಲೆಯ ಕಸಾಪ ಜಿಲ್ಲಾಧ್ಯಕ್ಷನಾಗಿ 2 ಬಾರಿ ಕೆಲಸ ಮಾಡಿದ್ದೇನೆ. ಅನೇಕ ಹೋರಾಟಗಳಲ್ಲಿ ಭಾಗವಹಿಸಿದ್ದೇನೆ. ಸಾಹಿತ್ಯದಲ್ಲಿ ಮತ್ತಷ್ಟು ಕೆಲಸ ಮಾಡಬೇಕೆಂಬ ಉದ್ದೇಶ ಹೊಂದಿರುವೆ ಎಂದರು.
ಸಾಹಿತಿ ಆರ್.ಜಿ.ಹಳ್ಳಿ ನಾಗರಾಜ್, ನಿವೃತ್ತ ಉಪನ್ಯಾಸಕ ಬಸವರಾಜ್ ನೆಲ್ಲಿಸರ, ಶಿವಕುಮಾರ್ ಉಪಸ್ಥಿತರಿದ್ದರು.
Designed, Developed and Maintained by PRABHAT SERVICES ™  , AJEYA KANNADA DAILY 2019 ©