ಶಿವಮೊಗ್ಗ,ಫೆ.18:
ಬಿಜೆಪಿಯಲ್ಲಿ ದಲಿತರಿಗೆ ಅತ್ಯಂತ ಮಾನ್ಯತೆ ನೀಡುತ್ತಿದ್ದು, ಹಾಗಾಗಿಯೇ ದಲಿತರು ಬಿಜೆಪಿ ಪಕ್ಷದತ್ತ ಹೆಚ್ಚು ಆಕರ್ಷಿತರಾಗಿದ್ದಾರೆ. ದಲಿತರ ಕಲ್ಯಾಣಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ರಾಜ್ಯ ಬಿಜೆಪಿ ಎಸ್.ಸಿ. ಮೋರ್ಚಾ ಉಪಾಧ್ಯಕ್ಷ ಎಂ. ವೆಂಕಟೇಶ್ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಏರ್ಪಡಿಸಿದ್ದ ಜಿಲ್ಲಾ ಎಸ್ಸಿ ಮೋರ್ಚಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಮೀಸಲಾತಿ ತೆಗೆದು ಹಾಕುತ್ತಾರೆಂದು ಅಪಪ್ರಚಾರ ಮಾಡಲಾಗುತ್ತಿದೆ. ಆದರೆ ಯಾವುದೇ ಕಾರಣಕ್ಕೂ ಅವರು ಮೀಸಲಾತಿಗೆ ಕೈ ಹಾಕುವುದಿಲ್ಲ. ಹೀಗಾಗಿ ಯಥಾ ಸ್ಥಿತಿಯಲ್ಲಿ ಮೀಸಲಾತಿ ಮುಂದುವರೆಯಲಿದೆ. ದಲಿತ ನಾಯಕ ಬಂಗಾರು ಲಕ್ಷ್ಮಣ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷನನ್ನಾಗಿ ಮಾಡಿದ್ದು ಬಿಜೆಪಿ. ರಾಜ್ಯಸಭೆಯಲ್ಲಿ ದಲಿತರ ಬಗ್ಗೆ ವಿಶೇಷವಾಗಿ ಚರ್ಚಿಸುವ ಸಲುವಾಗಿ ಎರಡು ದಿನ ನೀಡಿದ್ದು ಇದೇ ಪ್ರಧಾನಿ ಮೋದಿ. ರಾಜ್ಯದಲ್ಲಿ ಉದ್ಯಮ ಸ್ಥಾಪಿಸುವ ದಲಿತರಿಗೆ ಶೇ. 75 ರಷ್ಟು ಸಹಾಯ ಧನ ನೀಡಿದ್ದು ಸಿಎಂ ಯಡಿಯೂರಪ್ಪನವರು ಎಂದರು.
ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಕಾಸರವಳ್ಳಿ ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿ ಬಿಜೆಪಿ ಸರ್ಕಾರ ಅಂಬೇಡ್ಕರ್ ಚಿಂತನೆಗಳನ್ನು ಜಾರಿಗೆ ತರುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಮಾಡಿದ ನಂತರ ಅಲ್ಲಿನ ದಲಿತರಿಗೆ ಮೀಸಲಾತಿ ಸಿಕ್ಕಿತು. ಇಡೀ ದೇಶ ಮತ್ತು ರಾಜ್ಯದಲ್ಲಿ ದಲಿತರ ಕಲ್ಯಾಣಕ್ಕಾಗಿ ಹಲವು ಯೋಜನೆಗಳಿದ್ದು, ಇದರ ಪ್ರಯೋಜನ ಪಡೆಯಬೇಕು ಎಂದರು.
ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಮಂಡೇನಕೊಪ್ಪ ದೇವರಾಜ್, ಜಿಪಂ ಸದಸ್ಯರಾದ ವೀರಭದ್ರಪ್ಪ ಪೂಜಾರಿ, ಶಿವಕುಮಾರ್, ಸೌಮ್ಯ ಭೋಜ್ಯಾನಾಯ್ಕ, ಶಿವಾಜಿ, ಲತಾ ಗಣೇಶ್, ಕೃಷ್ಣಮೂರ್ತಿ ಮತ್ತಿತರರು ಇದ್ದರು.
Designed, Developed and Maintained by PRABHAT SERVICES ™  , AJEYA KANNADA DAILY 2019 ©