ಶಿವಮೊಗ್ಗ, ಫೆ.19:
ಬಸವೇಶ್ವರ ವೀರಶೈವ ಸಮಾಜಸೇವಾ ಸಂಘದ ವತಿಯಿಂದ ಸುಮಾರು 5 ಕೋಟಿ ರೂ. ವೆಚ್ಚದ ಉದ್ದೇಶಿತ ವಿದ್ಯಾರ್ಥಿ ನಿಲಯ ಕಟ್ಟಡದ ಭೂಮಿ ಪೂಜೆ ಕಾರ್ಯಕ್ರಮ ಫೆ.21ರಂದು ಬೆಳಿಗ್ಗೆ 9.30ಕ್ಕೆ ಗೋಪಾಳದ ಅನುಪಿನಕಟ್ಟೆಯಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎನ್.ಜೆ. ರಾಜಶೇಖರ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನೆಲ ಅಂತಸ್ತು ಬಿಟ್ಟು 2 ಅಂತಸ್ತಿನ ವಿದ್ಯಾರ್ಥಿನಿಲಯ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. 28 ರೂಮ್ಗಳಿದ್ದು, 150 ಮಕ್ಕಳಿಗೆ ಅವಕಾಶ ಕಲ್ಪಿಸಲಾಗುವುದು.ಎಲ್ಲರಿಗೂ ಉಚಿತವಾಗಿ ನೀಡಬೇಕೆಂಬ ಸಂಕಲ್ಪವಿದೆ. ಇದಕ್ಕಾಗಿ 5 ಕೋಟಿ ರೂ.ವೆಚ್ಚವಾಗಲಿದ್ದು, ಸರ್ಕಾರದಿಂದ 2 ಕೋಟಿ ರೂ.ಅನುದಾನ ಸಿಗುವ ಭರವಸೆಯಿದೆ. ಉಳಿದ ಹಣವನ್ನು ಸಂಘದ ಉಳಿತಾಯದ ಹಣ ಮತ್ತು ದಾನಿಗಳಿಂದ ಸಂಗ್ರಹಿಸಲಾಗುವುದು ಎಂದರು.
ಸಾಂಸದ ಬಿ.ವೈ.ರಾಘವೇಂದ್ರ ಅವರು ಭೂಮಿ ಪೂಜೆ ನೆರವೇರಿಸುವರು, ಸಚಿವ ಕೆ.ಎಸ್.ಈಶ್ವರಪ್ಪ ಶಿಲಾನ್ಯಾಸ ಫಲಕ ಅನಾವರಣಗೊಳಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಆಯನೂರು ಮಂಜುನಾಥ್, ಎಸ್.ರುದ್ರೇಗೌಡ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ, ಸ್ಬುಡಾ ಅಧ್ಯಕ್ಷ ಎಸ್.ಹೆಚ್. ಜ್ಯೋತಿಪ್ರಕಾಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.
ರಾಮಮಂದಿರ ನಿರ್ಮಾಣಕ್ಕೆ ಸಮಾಜದ ವತಿಯಿಂದ 5 ಲಕ್ಷ ರೂ.ದೇಣಿಗೆ ನೀಡಲಾಗುವುದು.ಹಾಗೆಯೇ ಮುಂದಿನ ದಿನಗಳಲ್ಲಿ ತಮ್ಮದೇ ಆದ ಜಾಗದಲ್ಲಿ ವಿದ್ಯಾರ್ಥಿನಿ ನಿಲಯವನ್ನು ಸ್ಥಾಪಿಸುವ ಉದ್ದೇಶವಿದೆ. ಇದರ ಜೊತೆಗೆ ಈಗಿರುವ ಎನ್ ಡಿ ಎ ಹಾಸ್ಟೆಲ್ನ್ನು ಕೂಡ ಪುನರ್ನಿರ್ಮಾಣ ಮಾಡಲಾಗುವುದು ಎಂದರು.
ಸಂಘದ ಗೌರವ ಕಾರ್ಯದರ್ಶಿ ಟಿ.ಬಿ. ಜಗದೀಶ್, ಸಹ ಕಾರ್ಯದರ್ಶಿ ಹೆಚ್.ಎಂ. ಶಿವಾನಂದ್, ನಿರ್ದೇಶಕರಾದ ಹೆಚ್.ಶಾಂತಾ ಆನಂದ್, ಕೆ.ಸಿ. ನಾಗರಾಜ್, ಮಹಾಲಿಂಗಯ್ಯ ಶಾಸ್ತ್ರಿ, ಎನ್.ಎಂ. ಸಂಜಯ್ಕುಮಾರ್ ಮುಂತಾದವರಿದ್ದರು.
Designed, Developed and Maintained by PRABHAT SERVICES ™  , AJEYA KANNADA DAILY 2019 ©