Sunday 07 March 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಭೀಮ್ ಸುದ್ದಿ

ಮನೋದೈಹಿಕ ಆರೋಗ್ಯಕ್ಕೆ ಯೋಗ ಅವಶ್ಯ: ವಸಂತಕುಮಾರ್

ಸೂರ್ಯಥಾನ್ -2021 ಆವೃತ್ತಿಯ 108 ಸೂರ್ಯ ನಮಸ್ಕಾರಗಳ ಯೋಗ ಕಾರ್ಯಕ್ರಮ

2021-02-22 05:30:00, ajeyanews.com

Ajeya Image
ಶಿವಮೊಗ್ಗ,ಫೆ.22:

ಇಂದಿನ ಯಾಂತ್ರಿಕಮಯ,ತಾಂತ್ರಿಕತೆಯ ಆಧುನಿಕ  ಜೀವನ ಶೈಲಿಯು ನಮ್ಮ  ದೈಹಿಕ ಹಾಗೂ ಮಾನಸಿಕ ಒತ್ತಡಕ್ಕೆ ಕಾರಣವಾಗಿದ್ದು ಇದರ ನಿವಾರಣೆಗೆ ಯೋಗ ಮತ್ತು ಧ್ಯಾನ ಉತ್ತಮ ಮತ್ತು ಸರಳ ಸಾಧನವಾಗಿದೆ. ಯುವಜನತೆ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು ಅನುಭವಿ ಯೋಗ ಶಿಕ್ಷಕರಲ್ಲಿ ಯೋಗಾಭ್ಯಾಸ ಕಲಿಕೆಯನ್ನು ಮಾಡಬೇಕು ಎಂದು ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕೆ. ವಿ. ವಸಂತಕುಮಾರ್ ಅಭಿಪ್ರಾಯಪಟ್ಟರು.

 ರಾಮಕೃಷ್ಣ ಗುರುಕುಲ ವಸತಿ ಶಾಲೆ ಸಭಾಂಗಣದಲ್ಲಿ ಕಣಾದ ಯೋಗ ರಿಸರ್ಚ್ ಫೌಂಡೇಶನ್, ಆರ್ಟ್ ಆಫ್ ಲಿವಿಂಗ್, ಪರೋಪಕಾರಂ ಹಾಗೂ  ರಾಮಕೃಷ್ಣ  ಶಿಕ್ಷಣ ಸಂಸ್ಥೆ ಸಹಯೋಗದೊಂದಿಗೆ ಆಯೋಜಿಸಿದ್ದ  ಸೂರ್ಯಥಾನ್ -2021 ಆವೃತ್ತಿಯ 108 ಸೂರ್ಯ ನಮಸ್ಕಾರಗಳ ಯೋಗ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಗರದಲ್ಲಿ ಅನೇಕ ಯೋಗ ತರಬೇತಿ ಕೇಂದ್ರಗಳಿದ್ದು, ಕಣಾದ ಯೋಗ  ರಿಸರ್ಚ್ ಫೌಂಡೇಶನ್ ಕಳೆದ ಅನೇಕ ವರ್ಷಗಳಿಂದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉಚಿತವಾಗಿ ಯೋಗ ಕಲಿಸುತ್ತಿರುವುದು ಶ್ಲಾಘನೀಯ. ಯುವ ಜನತೆಯಲ್ಲಿ ಅದರಲ್ಲೂ ವಿಶೇಷವಾಗಿ ಶಾಲಾಮಕ್ಕಳಲ್ಲಿ ಯೋಗದ ಅರಿವು ಮತ್ತು ಅನುಷ್ಠಾನವನ್ನು ಮೂಡಿಸಲು ಕಣಾದ ಯೋಗ ಫೌಂಡೇಷನ್ ನವರು  ಕಳೆದ 7 ವರ್ಷಗಳಿಂದ ಸೂರ್ಯಥಾನ್ ಎಂಬ 108 ಸೂರ್ಯ ನಮಸ್ಕಾರಗಳ ಜನಪ್ರಿಯತೆಯನ್ನು ಗಳಿಸಿರುವ ಕಾರ್ಯಕ್ರಮವನ್ನು ಪ್ರತಿ ವರ್ಷವೂ ರಥಸಪ್ತಮಿ ಪ್ರಯುಕ್ತ ಹಮ್ಮಿಕೊಂಡು ಸಹಸ್ರಾರು ವಿದ್ಯಾರ್ಥಿಗಳನ್ನು ಸೇರಿಸಿ ಯೋಗ ಪಸರಿಸುವ ಪುಣ್ಯದ ಕೆಲಸವನ್ನು ಮಾಡುತ್ತಾ ಬಂದಿದೆ ಎಂದರು.

 ಶ್ರೀರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಮಾತೆ ಶಾರದಾದೇವಿಯವರ ಆದರ್ಶ ನುಡಿಗಳನ್ನು  ಸದಾ ಸ್ಮರಿಸಿಕೊಳ್ಳಬೇಕು. ಮತ್ತು ಅವುಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. 

ಶ್ರೀಧರ್, ಪರೋಪಕಾರಂ

ಕಣಾದ ಯೋಗ ಫೌಂಡೇಷನ್ ವತಿಯಿಂದ ಈ ಸಂದರ್ಭದಲ್ಲಿ ಸೂರ್ಯಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಉಚಿತವಾಗಿ ಟಿ ಶರ್ಟ್ ಮತ್ತು ಪ್ರಮಾಣಪತ್ರಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳು ಯೋಗವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಲು ಹುರಿದುಂಬಿಸುತ್ತಿದೆ. ಯುವಜನರಲ್ಲಿ ಯೋಗ- ಆರೋಗ್ಯ, ದೇಹ ಭಕ್ತಿ, ದೇಶ ಭಕ್ತಿ , ಗುರುಭಕ್ತಿ ಜಾಗೃತಿಗಾಗಿ ಫಿಟ್ ಇಂಡಿಯಾ ಮತ್ತು ರಥ ಸಪ್ತಮಿ ಪ್ರಯುಕ್ತ ರಾಮಕೃಷ್ಣ  ಗುರುಕುಲ ವಸತಿ ಶಾಲೆ  ೩೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಮತ್ತು  ಯೋಗಾಸಕ್ತರನ್ನು  ತೊಡಗಿಸಿಕೊಂಡು 108 ಸೂರ್ಯ ನಮಸ್ಕಾರಗಳ ಸೂರ್ಯಥಾನ್ ಮತ್ತು ರಥಸಪ್ತಮಿ ಮಹತ್ವದ ಬಗ್ಗೆ ಉಪನ್ಯಾಸವನ್ನು ಆಯೋಜಿಸಿರುವುದು ಸುತ್ಯರ್ಹ ಎಂದರು.

ರಥ ಸಪ್ತಮಿ ಹಾಗೂ ಸೂರ್ಯ ನಮಸ್ಕಾರ  ಮಹತ್ವದ  ಕುರಿತು  ಪೇಸ್ ಪಿಯು ಕಾಲೇಜಿನ ಉಪನ್ಯಾಸಕಿ ಡಾ. ಮೈತ್ರೇಯಿ ಆದಿತ್ಯ ಪ್ರಸಾದ್ ಉಪನ್ಯಾಸ ನೀಡಿದರು.

ಕಣಾದ ಯೋಗ ಸಂಸ್ಥೆಯ ಕಾರ್ಯದರ್ಶಿ ಯೋಗಾಚಾರ್ಯ ಅನಿಲ್ ಕುಮಾರ್ ಎಚ್. ಶೆಟ್ಟರ್ ವಿದ್ಯಾರ್ಥಿಗಳಿಗೆ ಸೂರ್ಯ ನಮಸ್ಕಾರಗಳ ಯೋಗ ಶಿಕ್ಷಣ ನೀಡಿದರು. ಆರ್ಟ್ ಆಫ್ ಲಿವಿಂಗ್ ನ  ಶಬರೀಶ್ ಕಣ್ಣನ್  ಸತ್ಸಂಗ ಮತ್ತು ಧ್ಯಾನ ನಡೆಸಿಕೊಟ್ಟರು.ರಾಮಕೃಷ್ಣ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಶೋಭಾ ವೆಂಕಟರಮಣ ರವರು ಉಪಸ್ಥಿತರಿದ್ದರು. 

ಮಮತಾ ಯತೀಶ್ ಸ್ವಾಗತಿಸಿ, ರಾಮಕೃಷ್ಣ ಶಾಲೆಯ ಮುಖ್ಯೋಪಾಧ್ಯಾಯ ವೆಂಕಟೇಶ್ ವಂದಿಸಿದರು. ಸರ್ವಧರ್ಮ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವು ವಂದೇ ಮಾತರಂ ಸಮೂಹ ಗಾಯನದೊಂದಿಗೆ ಮುಕ್ತಾಯವಾಯಿತು. ತ್ಯಾಗರಾಜ ಮಿತ್ಯಾಂತ ಕಾರ್ಯಕ್ರಮ ನಿರೂಪಿಸಿದರು.

ಪದಗಂಟು :         
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©