Friday 14 May 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಭೀಮ್ ಸುದ್ದಿ

ಶಿವಮೊಗ್ಗದಲ್ಲಿ ಟೆಲಿಮೆಡಿಸನ್ ಕೇಂದ್ರ ಆರಂಭ

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಆರಂಭಿಸುತ್ತಿರುವ ಟೆಲಿ ಮೆಡಿಸನ್ ಕೇಂದ್ರದ ಉದ್ಘಾಟನೆ ಮೇ 4ರ ನಾಳೆ ಬೆಳಿಗ್ಗೆ 10 ಗಂಟೆಗೆ ನಡೆಯಲಿde.

2021-05-03 05:30:00, ajeyanews.com

Ajeya Imageಶಿವಮೊಗ್ಗ,ಮೇ 3:
ಸೇವಾ ಭಾರತಿ ಕರ್ನಾಟಕದ ಕೋವಿಡ್ ಸುರಕ್ಷಾ ಪಡೆ ವತಿಯಿಂದ ಕೋವಿಡ್ ಮತ್ತು ಅವಲಂಬಿತರಿಗೆ ವೈದ್ಯಕೀಯ ಮತ್ತು ಇತರೆ ಸೌಲಭ್ಯಗಳ ಬಗ್ಗೆ ಮಾಹಿತಿ ಮತ್ತು ಸೇವೆ ನೀಡುವ ಉದ್ದೇಶದಿಂದ ಶಿವಮೊಗ್ಗದಲ್ಲಿ ಟೆಲಿಮೆಡಿಸನ್ ಕೇಂದ್ರವನ್ನು ಆರಂಭಿಸಲಾಗುತ್ತಿದೆ ಎಂದು ಸೇವಾ ಭಾರತೀ ಕರ್ನಾಟಕದ ಮುಖ್ಯಸ್ಥ ಡಾ. ರವಿಕಿರಣ್ ತಿಳಿಸಿದರು. 

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಂದಿನ ದಿನಗಳಲ್ಲಿ ಕೋವಿಡ್ ಸೋಂಕು ಹೆಚ್ಚು ಜನರಲ್ಲಿ ಕಾಣಿಸಿಕೊಳ್ಳುವ ಬಗ್ಗೆ ತಜ್ಞರ ವರದಿಯಿದ್ದು, ಇಂತಹ ಸಂದರ್ಭವನ್ನು ಸಮರ್ಥವಾಗಿ ಎದುರಿಸಬೇಕಾಗಿದೆ. ಹಾಗಾಗಿ ಈಗಾಗಲೇ ಶಿವಮೊಗ್ಗ ಜಿಲ್ಲಾಡಳಿತ ಉತ್ತಮವಾದ ಕ್ರಮಕೈಗೊಂಡಿದ್ದು, ಅದಾಗಿಯೂ ಸೋಂಕಿನ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಜಿಲ್ಲಾಡಳಿತ ಮತ್ತು ವೈದ್ಯಕೀಯ ಸಿಬ್ಬಂದಿ ಹಾಗೂ ಇತರೆ ಸಿಬ್ಬಂದಿಗಳ ಮೇಲೆ ಅತೀವ ಒತ್ತಡ ಇರುವುದರಿಂದ ಸೇವಾ ಭಾರತಿ ಕರ್ನಾಟಕ ಐಎಂಎ, ಕೋವಿಡ್ ಸುರಕ್ಷಾ ಪಡೆ ಹಾಗೂ ನಗರದ ಹಲವಾರು ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಟೆಲಿಮೆಡಿಸನ್ ಕೇಂದ್ರವನ್ನು ಆರಂಭಿಸಲಾಗುತ್ತಿದೆ ಎಂದರು. 


ಇದನ್ನೂಓದಿ: ಶಿವಮೊಗ್ಗದಲ್ಲಿ ಕೋವಿಡ್ ಸಹಾಯವಾಣಿ ಆರಂಭ- ಕನಿಷ್ಟ 600ಕ್ಕೂ ಹೆಚ್ಚು ವೆಂಟಿಲೇಟರ್ ತಕ್ಷಣ ಒದಗಿಸಿ: ಸುಂದರೇಶ್

ಕೋವಿಡ್ ಸೋಂಕಿತರ ಮತ್ತು ಇತರೆ ಆರೋಗ್ಯದ ತೊಂದರೆ ಇರುವವರು ಅನಗತ್ಯವಾಗಿ ಆಸ್ಪತ್ರೆಗೆ ಬರುವುದನ್ನು ಮತ್ತು ಊಟ, ಉಪಾಹಾರಗಳಿಗೆ ಹೊರಗೆ ಬರುವುದನ್ನು ತಪ್ಪಿಸಿ ತನ್ಮೂಲಕ ಸೋಂಕು ಹೆಚ್ಚು ಜನರಿಗೆ ಹೆಚ್ಚುವುದನ್ನು ತಪ್ಪಿಸುವ ಸಲುವಾಗಿ ಕೋವಿಡ್ ಟೆಸ್ಟ್ ಬಗ್ಗೆ ಮಾಹಿತಿ, ಆಹಾರ-ಔಷಧಿ-ಆಂಬುಲೆನ್ಸ್ ಸೇವೆ, ರಕ್ತ ಪರೀಕ್ಷೆ ಮನೆಬಾಗಿಲಿಗೆ, ಆರೈಕೆ ಕೇಂದ್ರಗಳ ಮಾಹಿತಿ, ನಗರದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳ ಬೆಡ್ ಸೌಲಭ್ಯಗಳ ಮಾಹಿತಿ, ತಜ್ಞ ವೈದ್ಯರೊಂದಿಗೆ ಸಂವಾದ, ಲಾಡ್ಜ್‌ಗಳಲ್ಲಿ ಉಳಿದುಕೊಂಡು ಚಿಕಿತ್ಸೆ ಪಡೆಯುವವರಿಗೆ ಸಹಾಯ ಸೇರಿದಂತೆ ಹಲವಾರು ಸೇವೆಗಳನ್ನು ಕೇಂದ್ರದಿಂದ ಒದಗಿಸಲಾಗುವುದು ಎಂದರು. 

 ಕೋವಿಡ್ ಲಸಿಕೆ ಕೊರತೆಯಿಲ್ಲ. ಮೊದಲು ಜಿಲ್ಲೆಗೆ ಪ್ರತಿ ದಿನ ಲಸಿಕೆ ಬರುತ್ತಿತ್ತು. ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಈಗ ಎರಡೂ ಮೂರು ದಿನಕ್ಕೊಮ್ಮೆ ಬರುತ್ತಿದೆ. ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಾಗುವುದನ್ನು ತಡೆಗಟ್ಟಲು ಟೋಕನ್ ವ್ಯವಸ್ಥೆ ಮಾಡಲಾಗಿದೆ. ಆಕ್ಸಿಜನ್ ಕೊರತೆ ನೀಗಿಸಲು ಭದ್ರಾವತಿಯ ವಿ ಐ ಎಸ್‌ ಎಲ್ ಕಾರ್ಖಾನೆಯ ಪ್ಲಾಂಟ್‌ನಲ್ಲಿ ಆಕ್ಸಿಜನ್ ಉತ್ಪಾದನೆ ಹೆಚ್ಚಳಕ್ಕೆ ಕ್ರಮಕೈಗೊಂಡಿದೆ. ವಾರದ ಒಂದು ದಿನದ ಆಮ್ಲಜನಕ ಉತ್ಪಾದನೆಯೂ ಜಿಲ್ಲೆಗೆ ಸಾಕಾಗುತ್ತದೆ. ಉಳಿದ ದಿನದ ಉತ್ಪಾದನೆಯನ್ನು ಬೇರೆ ಜಿಲ್ಲೆಗಳಿಗೂ ವಿತರಿಸಬಹುದಾಗಿದೆ. 

- ಕೆ.ಎಸ್. ಈಶ್ವರಪ್ಪ, ಜಿಲ್ಲಾ ಉಸ್ತುವಾರಿ ಸಚಿವ

ಸೋಂಕಿನ ಲಕ್ಷಣಗಳಿಲ್ಲದೆ ಕೋವಿಡ್ ಪಾಸಿಟಿವ್ ಆಗಿರುವ ವ್ಯಕ್ತಿಗಳು ಹೊರಗೆ ಓಡಾಡುತ್ತಿದ್ದು, ಅಂತಹವರಿಗೆ ಅಗತ್ಯ ನೆರವು ನೀಡಿ ಮನೆಯಲ್ಲೇ ಕ್ವಾರಂಟೈನ್ ಆಗಲು ಸಹಕಾರ ನೀಡಿ ರೋಗ ಹರಡುವುದನ್ನು ತೆಡೆಯುವ ಪ್ರಯತ್ನ ಮಾಡಬೇಕಾಗಿದೆ. ರಕ್ತದ ಕೊರತೆ ಉಂಟಾಗಬಾರದೆಂದು ಈಗಾಗಲೇ ಕೋವಿಡ್ ಸುರಕ್ಷಾ ಪಡೆಯಿಂದ 500ಕ್ಕೂ ಹೆಚ್ಚು ಯುನಿಟ್ ರಕ್ತ ಸಂಗ್ರಹಿಸಲಾಗಿದ್ದು, ಜೂನ್ ಅಂತ್ಯದ ವೇಳೆಗೆ ಕನಿಷ್ಟ 3 ಸಾವಿರ ಯುನಿಟ್ ರಕ್ತ ಖರೀದಿಸಲು ಕ್ರಮಕೈಗೊಳ್ಳಲಾಗಿದೆ ಎಂದರು. 

ಆರ್‌ ಎಸ್‌ ಎಸ್ ಮುಖಂಡ ಪಟ್ಟಾಭಿರಾಮ್ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ  ಟೆಲಿ ಮೆಡಿಸನ್ ಕೇಂದ್ರ ಆರಂಭಿಸಲಾಗುತ್ತಿದ್ದು, ಮುಂದೆ ತಾಲ್ಲೂಕು ಕೇಂದ್ರಗಳಲ್ಲಿ ಸಹ ಕೇಂದ್ರವನ್ನು ಆರಂಭಿಸುವ ಚಿಂತನೆಯಿದೆ. ಕೊರೋನಾ ತಡೆಗಟ್ಟಲು ಸರ್ಕಾರದ ನೆರವಿನೊಂದಿಗೆ ಉಚಿತ ಸೇವೆಯನ್ನು ಒದಗಿಸಲು ಬದ್ಧರಾಗಿದ್ದೇವೆ ಎಂದರು. 

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಆರ್‌ ಎಸ್‌ ಎಸ್‌ ನ ಅಂಗ ಸಂಸ್ಥೆಯಾದ ಸೇವಾ ಭಾರತಿ ಕರ್ನಾಟಕ ಕೋವಿಡ್ ಸುರಕ್ಷಾ ಪಡೆಯು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ  ಆರಂಭಿಸುತ್ತಿರುವ ಟೆಲಿ ಮೆಡಿಸನ್ ಕೇಂದ್ರದ ಉದ್ಘಾಟನೆ ನಾಳೆ ಬೆಳಿಗ್ಗೆ 10 ಗಂಟೆಗೆ ನಡೆಯಲಿದ್ದು, ಡಾ. ಶ್ರೀಕಾಂತ್ ಹೆಗಡೆ, ಡಿ.ಹೆಚ್.ಶಂಕರಮೂರ್ತಿ, ಪಟ್ಟಾಭಿರಾಮ್ ಹಾಗೂ ತಾವು ಭಾಗವಹಿಸುತ್ತಿದ್ದೇವೆ. ಕೇಂದ್ರಕ್ಕೆ ಸರ್ಕಾರದಿಂದ ಎಲ್ಲಾ ನೆರವು ಒದಗಿಸಲಾಗುವುದು ಎಂದರು. 

ಶಾಸಕ ಅಶೋಕ್‌ ನಾಯ್ಕ್, ಕೆ.ಈ. ಕಾಂತೇಶ್, ಡಿ.ಎಸ್. ಅರುಣ್, ಸುಧೀಂದ್ರ, ಎಸ್.ಹೆಚ್. ಜ್ಯೋತಿಪ್ರಕಾಶ್, ರುದ್ರೇಶ್, ವಾಸುದೇವ್ ಇನ್ನಿತರರು ಉಪಸ್ಥಿತರಿದ್ದರು.

ಪದಗಂಟು :       
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©