Tuesday 28 September 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ಕಂಟೈನ್‌ಮೆಂಟ್ ಜೋನ್‌ಗಳಲ್ಲಿ ಪ್ರತಿನಿತ್ಯ ಸ್ಯಾನಿಟೈಸೇಷನ್

ಪಾಲಿಕೆಯಿಂದ 32 ಮೈಕ್ರೊ ಕಂಟೈನ್‌ಮೆಂಟ್ ಜೋನ್‌ಗಳನ್ನು ಮಾಡಲಾಗಿದ್ದು, ಪ್ರಸ್ತುತ 30 ಸಕ್ರಿಯ ಕಂಟೈನ್‌ಮೆಂಟ್ ಜೋನ್‌ಗಳಿವೆ. ಸರ್ಕಾರದ ಮಾರ್ಗಸೂಚಿ ಅನುಷ್ಠಾನಗೊಳಿಸುವ ಸಂಬಂಧ 6 ಜನರಿರುವ 10 ತಂಡಗಳನ್ನು ರಚಿಸಲಾಗಿದೆ

2021-05-12 05:30:00, ajeyanews.com

Ajeya Imageಶಿವಮೊಗ್ಗ, ಮೇ 12:
ಕೋವಿಡ್ 2ನೇ ಅಲೆಯು ರಾಜ್ಯದಾದ್ಯಂತ ತೀವ್ರವಾಗಿ ಹರಡುತ್ತಿದ್ದು, ರಾಜ್ಯ ಸರ್ಕಾರ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಗರದ ಎಲ್ಲಾ ಕಂಟೈನ್‌ಮೆಂಟ್ ಜೋನ್‌ಗಳಲ್ಲಿ ಪ್ರತಿನಿತ್ಯ ಸ್ಯಾನಿಟೈಸ್ ಮಾಡಲಾಗುತ್ತಿದೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಮೇಯರ್ ಸುನಿತಾ ಅಣ್ಣಪ್ಪ ತಿಳಿಸಿದರು. 

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಾಲಿಕೆಯ ಕಸಸಂಗ್ರಹಣೆಯ ಎಲ್ಲಾ ಆಟೋ ಟಿಪ್ಪರ್‌ಗಳಲ್ಲಿ ಹಾಗೂ 5 ಖಾಸಗಿ ಆಟೋಗಳಲ್ಲಿ ಕೋವಿಡ್-19 ಮುಂಜಾಗ್ರತಾ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಇದುವರೆಗೂ ಪಾಲಿಕೆಯಿಂದ 32 ಮೈಕ್ರೊ ಕಂಟೈನ್‌ಮೆಂಟ್ ಜೋನ್‌ಗಳನ್ನು ಮಾಡಲಾಗಿದ್ದು, ಪ್ರಸ್ತುತ 30 ಸಕ್ರಿಯ ಕಂಟೈನ್‌ಮೆಂಟ್ ಜೋನ್‌ಗಳಿವೆ. ಸರ್ಕಾರದ ಮಾರ್ಗಸೂಚಿ ಅನುಷ್ಠಾನಗೊಳಿಸುವ ಸಂಬಂಧ 6 ಜನರಿರುವ 10 ತಂಡಗಳನ್ನು ರಚಿಸಲಾಗಿದೆ ಎಂದರು. 

ಪಾಲಿಕೆ ವ್ಯಾಪ್ತಿಯಲ್ಲಿ ಮಾರ್ಗಸೂಚಿ ಉಲ್ಲಂಘನೆಯಡಿ 2274 ಪ್ರಕರಣಗಳಿಂದ 5,89,750 ರೂ. ದಂಡ ವಿಧಿಸಲಾಗಿದೆ. 7 ಪ್ರಕರಣಗಳಿಗೆ ಆರಕ್ಷಕ ಇಲಾಖೆಯಲ್ಲಿ ದೂರು ದಾಖಲಿಸಲಾಗಿದೆ. ಚೆಕ್ ಪೋಸ್ಟ್ ನಿರ್ವಹಣೆಗಾಗಿ ಪಾಲಿಕೆಯ 8 ಸಿಬ್ಬಂದಿಗಳನ್ನು ಆರಕ್ಷಕ ಇಲಾಖೆಗೆ ನಿಯೋಜಿಸಲಾಗಿದೆ. ಪಾಲಿಕೆಯ 1 ಮುಕ್ತಿ ವಾಹಿನಿ ವಾಹನ ಹಾಗೂ ಪಿಪಿಇ ಕಿಟ್‌ಗಳನ್ನು ಮೆಗ್ಗಾನ್ ಬೋಧನಾ ಆಸ್ಪತ್ರೆಗೆ ಕೋವಿಡ್-19ಗಾಗಿ ನೀಡಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿತ ವ್ಯಕ್ತಿಯು ಮರಣ ಹೊಂದಿದಲ್ಲಿ ಅವರ ಅಂತ್ಯಕ್ರಿಯೆಯನ್ನು ಸರ್ಕಾರದ ಮಾರ್ಗಸೂಚಿಯನ್ವಯ ಕರ್ತವ್ಯ ನಿರ್ವಹಿಸಲು 6 ತಂಡ ರಚಿಸಲಾಗಿದೆ ಎಂದ ಅವರು ಕೊರೋನಾ ವಾರ್ ರೂಂನ್ನು ಪಾಲಿಕೆಯಲ್ಲಿ ತೆರೆಯಲಾಗಿದ್ದು, ಸಹಾಯವಾಣಿ (ಟೋಲ್ ಫ್ರೀ ನಂ: 18004257677) ಆಗಿದೆ ಎಂದರು.

ನಗರದ ಕೂಲಿ ಕಾರ್ಮಿಕರು, ವಲಸಿಗರಿಗೆ ಮತ್ತು ಇತರೆ ದುರ್ಬಲ ವರ್ಗದವರಿಗೆ, ಬಡವರಿಗೆ ಅನುಕೂಲವಾಗುವಂತೆ ಪ್ರತಿದಿನ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ಇಂದಿರಾ ಕ್ಯಾಂಟೀನ್‌ಗಳ ಮೂಲಕ ಉಚಿತವಾಗಿ ನೀಡಲಾಗುತ್ತಿದ್ದು, ಪಾಲಿಕೆಯ ಆರೋಗ್ಯ ವಿಭಾಗ ಇದರ ನಿರ್ವಹಣೆ ವಹಿಸಲಿದೆ. ಆನ್‌ಲೈನ್ ಮೂಲಕ ಆಸ್ತಿತೆರಿಗೆಯನ್ನು ಕಟ್ಟಬಹುದಾಗಿದೆ. ಆಸ್ತಿ ತೆರಿಗೆಯಲ್ಲಿ ಶೇ.5ರಷ್ಟು ರಿಯಾಯಿತಿಯನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ ಎಂದರು. 

ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಹೊನ್ನವಿಲೆ ಧೀರರಾಜ್, ಮಾಜಿ ಮೇಯರ್ ಸುವರ್ಣ ಶಂಕರ್, ಮಾಜಿ ಉಪ ಮೇಯರ್ ಸುರೇಖಾ ಮುರುಳೀಧರ್, ಆಯುಕ್ತ ಚಿದಾನಂದ್‌ವಟಾರೆ, ಎಸ್.ಜ್ಞಾನೇಶ್ವರ್, ಅನಿತಾ ರವಿಶಂಕರ್ ಇನ್ನಿತರರು ಉಪಸ್ಥಿತರಿದ್ದರು.

ಪದಗಂಟು :      
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©