Sunday 13 June 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಭೀಮ್ ಸುದ್ದಿ

ಕೋವಿಡ್ ಸುರಕ್ಷಾಪಡೆಗೆ ಬೆಕ್ಕಿನಕಲ್ಮಠದ ನೆರವಿನ ಹಸ್ತ

ಮನುಷ್ಯನ ದುರಾಸೆಗಳು ಈಗಾಗಲೇ ನಮಗೆ ಪಾಠವಾಗಿವೆ. ಸಂಕಷ್ಟಗಳನ್ನು ಎದುರಿಸಲಾಗದ ಸ್ಥಿತಿಗೆ ಮನುಷ್ಯ ತಲುಪಿದ್ದಾನೆ. ಪ್ಲೇಗ್, ಕಾಲರಾ, ಸಿಡುಬು ಮುಂತಾದ ಅನೇಕ ಸಾಂಕ್ರಮಿಕ ರೋಗಗಳನ್ನು ಎದುರಿಸಿರುವ ನಾವು ಈಗ ಕೊರೋನಾ ಸಂಕಷ್ಟಕ್ಕೆ ಎದುರಾಗಿದ್ದೇವೆ

2021-05-21 05:30:00, ajeyanews.com

Ajeya Imageಶಿವಮೊಗ್ಗ, ಮೇ 21:
ಸೇವಾ ಭಾರತಿ ಮತ್ತು ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಯುತ್ತಿರುವ ಕೋವಿಡ್ ಸುರಕ್ಷಾ ಪಡೆಗೆ ಇಲ್ಲಿನ ಬೆಕ್ಕಿನಕಲ್ಮಠದ ಸ್ವಾಮೀಜಿಯವರು ನೆರವಿನ ಹಸ್ತ ಚಾಚಿದ್ದಾರೆ. ಇಂದು ಬೆಳಿಗ್ಗೆ ಬೆಕ್ಕಿನ ಕಲ್ಮಠ ಆವರಣದಲ್ಲಿ ಸುಮಾರು 5 ಕ್ವಿಂಟಾಲ್‌ಗೂ ಹೆಚ್ಚು ಅಕ್ಕಿ, ತೆಂಗಿನಕಾಯಿ, ಔಷಧಿ ಸೇರಿದಂತೆ ಇತರ ವಸ್ತುಗಳನ್ನು ಸುರಕ್ಷಾ ಪಡೆಗೆ ನೀಡಿದರು. 

ನಂತರ ಮಾತನಾಡಿದ ಬೆಕ್ಕಿನಕಲ್ಮಠ ಶ್ರೀಗಳಾದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಕೊರೋನಾದ ಇಂತಹ ಭಯದ ವಾತಾವರಣದಲ್ಲಿ ಸಾಂತ್ವನ ನೀಡುವ ಕೆಲಸವಾಗಬೇಕಿದೆ. ಇದು ಸಂಭ್ರಮದ ಕಾಲ ಅಲ್ಲ. ಆತಂಕ ಎಲ್ಲರನ್ನು ಕಾಡುತ್ತಿದೆ. ಗೊತ್ತು ಗುರಿಯಿಲ್ಲದ ಪ್ರಯಾಣದಂತಾಗಿದೆ. ಗಾಳಿಪಟದ ಸೂತ್ರವೇ ಇಲ್ಲವಾಗಿದೆ. ಇಂತಹ ಸಂದರ್ಭದಲ್ಲಿ ಮನುಷ್ಯ ಮನುಷ್ಯರ ನಡುವೆ ಪ್ರೀತಿ, ಅಂತಃಕರಣ, ಸಹಾಯದ ಹಸ್ತ, ಸೇವಾ ಮನೋಭಾವನೆ ಬೆಳೆಯಬೇಕಾಗಿದೆ ಎಂದರು.

ವಿಶ್ವಾಸಗಳು ಮತ್ತೆ ಮೂಡಬೇಕಾಗಿದೆ. ಉರಿಯುವ ಮನೆಯಲ್ಲಿ ಗಳ ಎಳೆಯುವ ಮನಸ್ಸುಗಳು ದೂರವಾಗಬೇಕಾಗಿದೆ. ಮನುಷ್ಯನ ದುರಾಸೆಗಳು ಈಗಾಗಲೇ ನಮಗೆ ಪಾಠವಾಗಿವೆ. ಸಂಕಷ್ಟಗಳನ್ನು ಎದುರಿಸಲಾಗದ ಸ್ಥಿತಿಗೆ ಮನುಷ್ಯ ತಲುಪಿದ್ದಾನೆ. ಪ್ಲೇಗ್, ಕಾಲರಾ, ಸಿಡುಬು ಮುಂತಾದ ಅನೇಕ ಸಾಂಕ್ರಮಿಕ ರೋಗಗಳನ್ನು ಎದುರಿಸಿರುವ ನಾವು ಈಗ ಕೊರೋನಾ ಸಂಕಷ್ಟಕ್ಕೆ ಎದುರಾಗಿದ್ದೇವೆ ಎಂದರು. 

ಇದರಿಂದ ಪಾರಾಗಲು ಒಳ್ಳೆಯ ಮನಸ್ಸಿನ ಒಳ್ಳೆಯ ಸೇವೆಯ ಜೊತೆಗೆ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ. ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಮಾಡಿಕೊಳ್ಳುವುದು ಆಗ ಬೇಕಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಆತ್ಮ ವಿಶ್ವಾಸವನ್ನು ಗಳಿಸಿಕೊಂಡು ಮಾನವೀಯತೆಯನ್ನು ಮೆರೆಯಬೇಕಾಗಿದೆ ಮತ್ತು ಇಡೀ ಸಮಾಜವೇ ಒಟ್ಟಾಗಿ ಈ ಕೊರೋನಾವನ್ನು ದೂರಮಾಡಬೇಕಾಗಿದೆ ಎಂದರು. 

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಸಮಾಜಕ್ಕೆ ಸಂಕಷ್ಟ ಉಂಟಾದಾಗ ಮಠಾಧೀಶ್ವರರು ನೆರವು ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ಕೆಲಸವಾಗಿದೆ. ಬೆಕ್ಕಿನ ಕಲ್ಮಠದ ಶ್ರೀಗಳು ಕೋವಿಡ್ ಪಡೆಗೆ ಅಕ್ಕಿ, ತೆಂಗಿನಕಾಯಿ ಇತ್ಯಾದಿಗಳನ್ನು ನೀಡಿ ಗೌರವವನ್ನು ಹೆಚ್ಚಿಸಿದ್ದಾರೆ. ಅವರ ಸ್ಪಂದನೆಗೆ ನಮ್ಮ ಕೃತಜ್ಞತೆಗಳು ಎಂದರು. 

ಪ್ರಮುಖರಾದ ಎಸ್.ದತ್ತಾತ್ರಿ, ಡಾ.ರವಿಕಿರಣ್, ವಾಸುದೇವ್, ಮಂಡೇನಕೊಪ್ಪ ದೇವರಾಜ್  ಸೇರಿದಂತೆ ಹಲವರಿದ್ದರು.

ಪದಗಂಟು :       
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©