Sunday 13 June 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಭೀಮ್ ಸುದ್ದಿ

ದಾವಣಗೆರೆ ಜಿಲ್ಲೆ ಮೂರು ದಿನ ಸಂಪೂರ್ಣ ಲಾಕ್‌ ಡೌನ್

ಈ ಆದೇಶದ ಅನ್ವಯ, ಎಲ್ಲಾ ಅಂಗಡಿ ಮುಂಗಟ್ಟುಗಳು/ವಾಣಿಜ್ಯ/ಕೈಗಾರಿಕಾ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಸಾರ್ವಜನಿಕರು ಅಗತ್ಯ ಚಟುವಟಿಕೆಗಳಿಗೆ ವಾಹನಗಳಲ್ಲಿ ಸಂಚರಿಸುವುದನ್ನು ನಿರ್ಬಂಧಿಸಿ, ನಡೆದುಕೊಂಡು ಹೊಗಲು ಮಾತ್ರ ಅವಕಾಶ ನೀಡಲಾಗಿದೆ.

2021-05-21 05:30:00, ajeyanews.com

Ajeya Imageದಾವಣಗೆರೆ, ಮೇ 21:
ಜಿಲ್ಲೆಯ ತಾಲ್ಲೂಕು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಸಾಂಕ್ರಾಮಿಕ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ದಿನೇ ದಿನೇ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ರೋಗ ಹರಡುವಿಕೆಯ ಸರಪಳಿಯನ್ನು ತುಂಡರಿಸಲು, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕೆಲವು ನಿಬಂಧನೆಗಳನ್ನು ಒಳಪಡಿಸಿ, ಬೆಳಿಗ್ಗೆ 10 ಗಂಟೆಯಿಂದ ಮೇ 24 ರಂದು ಬೆಳಿಗ್ಗೆ 6 ಗಂಟೆಯವರೆಗೆ ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್‌ ಡೌನ್ ಜಾರಿಗೊಳಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ್ ಹೇಳಿದರು.

 ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಸಂಪೂರ್ಣ ಲಾಕ್‌ ಡೌನ್ ಜಾರಿಗೊಳಿಸುವ ಕುರಿತಂತೆ ವಿವರಗಳನ್ನು ನೀಡಲು ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

 ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಇತ್ತೀಚೆಗೆ ನಡೆಸಿದ ಪ್ರಗತಿ ಪರಿಶೀಲಾ ಸಭೆಯಲ್ಲಿ ಪ್ರಸ್ತುತ ಕೋವಿಡ್-19 ಪರಿಸ್ಥಿತಿಯನ್ನು ಪರಿಗಣಿಸಿ ಪುನರಾವಲೋಕನ ಮಾಡಲಾಗಿತ್ತು. ಹೀಗಾಗಿ ಜಿಲ್ಲೆಯಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ತಡೆಗಟ್ಟಲು ಹೆಚ್ಚುವರಿಯಾಗಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದು ಅತ್ಯವಶ್ಯಕವಾಗಿದೆ ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ. ಕಳೆದ ಮೇ 12 ರಿಂದ 24ರವರೆಗೆ ಕಠಿಣ ಕ್ರಮಗಳನ್ನು ಸರ್ಕಾರ ಜಾರಿಗೊಳಿಸಿತ್ತು. ಆದರೆ ಪ್ರಕರಣಗಳ ಸಂಖ್ಯೆ ಏರುತ್ತಲೆ ಇದೆ. ಹೀಗಾಗಿ ರೋಗ ಹರಡುವಿಕೆಯ ಸರಪಳಿಯನ್ನು ತುಂಡರಿಸಲು ಇನ್ನಷ್ಟು ಕಠಿಣ ಕ್ರಮ ಜರುಗಿಸುವುದು ಅನಿವಾರ್ಯವಾದ ಕಾರಣ ಮೂರು ದಿನ ಸಂಪೂರ್ಣ ಲಾಕ್‌ ಡೌನ್ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಮೇ 24ರ ಬಳಿಕ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮುಖ್ಯಮಂತ್ರಿಗಳೇ ನಿರ್ಧಾರ ಕೈಗೊಳ್ಳಲಿದ್ದಾರೆ. ಸಾರ್ವಜನಿಕರು ಮುಂದೆ ಸಂಭವಿಸಬಹುದಾದ ಅನಾಹುತವನ್ನು ತಡೆಗಟ್ಟಲು ಮೂರು ದಿನಗಳ ಕಾಲ ಜಾರಿಗೊಳಿಸಿರುವ ಸಂಪೂರ್ಣ ಲಾಕ್‌ಡೌನ್‌ಗೆ ಸಹಕರಿಸಲು ಸಾರ್ವಜನಿಕರಲ್ಲಿ ಕೈಮುಗಿದು ಬೇಡಿಕೊಳ್ಳುತ್ತೇನೆ ಎಂದರು.

ಸಂಪೂರ್ಣ ಲಾಕ್‌ಡೌನ್ ನಿಬಂಧನೆಗಳು :

ಜಿಲ್ಲೆಯಾದ್ಯಂತ ಮೇ 24ರವರೆಗೆ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಆದೇಶ ಹೊರಡಿಸಿದ್ದಾರೆ. ಈ ಆದೇಶದ ಅನ್ವಯ, ಎಲ್ಲಾ ಅಂಗಡಿ ಮುಂಗಟ್ಟುಗಳು/ವಾಣಿಜ್ಯ/ಕೈಗಾರಿಕಾ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಸಾರ್ವಜನಿಕರು ಅಗತ್ಯ ಚಟುವಟಿಕೆಗಳಿಗೆ ವಾಹನಗಳಲ್ಲಿ ಸಂಚರಿಸುವುದನ್ನು ನಿರ್ಬಂಧಿಸಿ, ನಡೆದುಕೊಂಡು ಹೊಗಲು ಮಾತ್ರ ಅವಕಾಶ ನೀಡಲಾಗಿದೆ. ಯಾವುದೇ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಮದುವೆ ಸಮಾರಂಭಕ್ಕೆ ಈಗಾಗಲೇ ನೀಡಲಾಗಿರುವ ಅನುಮತಿ ಪ್ರಕರಣಗಳಲ್ಲಿ ಕೇವಲ 10 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಮದುವೆಗಳಲ್ಲಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನು ನಿರ್ಬಂಧಿಸಲಾಗಿದೆ. ಉಳಿದ ಎಲ್ಲಾ ಸಾಮಾಜಿಕ, ಧಾರ್ಮಿಕ ಸಭೆ ಸಮಾರಂಭಗಳನ್ನು ಮೇ 24ರ ಬೆಳಿಗ್ಗೆ 6 ಗಂಟೆಯವರೆಗೆ ನಿರ್ಬಂಧಿಸಲಾಗಿದೆ. ಅಂತ್ಯಸಂಸ್ಕಾರ/ಶವ ಸಂಸ್ಕಾರಗಳಲ್ಲಿ ಗರಿಷ್ಟ 5 ಜನರಿಗೆ ಮಾತ್ರ ಭಾಗವಹಿಸಲು ಅನುಮತಿಸಿದೆ. ದಾವಣಗೆರೆ ಜಿಲ್ಲೆಗೆ ಆಗಮಿಸುವವರನ್ನು ಪ್ರತೀ ಚೆಕ್ ಪೋಸ್ಟ್ ಗಳಲ್ಲಿ ವಿಚಾರಣೆ ನಡೆಸಿ, ದಾವಣಗೆರೆ ಜಿಲ್ಲೆಯಲ್ಲಿ ವಾಸ್ತವ್ಯ ಹೂಡುವುದಾದಲ್ಲಿ ಎಲ್ಲಿ ತಂಗುತ್ತಾರೆ ಎಂಬ ಬಗ್ಗೆ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆನ್ನು ಪಡೆದುಕೊಳ್ಳಲಾಗುವುದು ಹಾಗೂ ಹೊರ ಜಿಲ್ಲೆಯಿಂದ ಆಗಮಿಸುವವರು ಕಡ್ಡಾಯವಾಗಿ 14 ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕು ಎಂದರು.

 ವಾಹನ ಬಳಕೆಯನ್ನು ತುರ್ತು ವೈದ್ಯಕೀಯ ಸೇವೆಗಳಿಗೆ ಮಾತ್ರ ಬಳಸಬಹುದು, ವೈದ್ಯಕೀಯ ದಾಖಲೆಗಳನ್ನು ಚೆಕ್ ಪೋಸ್ಟ್ ಗಳಲ್ಲಿ ತೋರಿಸಬೇಕು. ಇತರೆ ಎಲ್ಲಾ ಖಾಸಗಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ವೈದ್ಯಕೀಯ ಹಾಗೂ ತುರ್ತು ಸೇವೆಗಳ ಎಲ್ಲಾ ಅಧಿಕಾರಿಗಳು/ಸಿಬ್ಬಂದಿಗಳ ಕರ್ತವ್ಯ ನಿಮಿತ್ತ ಓಡಾಟಕ್ಕೆ ಯಾವುದೆ ನಿರ್ಬಂಧವಿರುವುದಿಲ್ಲ. ಆದರೆ ಕಡ್ಡಾಯವಾಗಿ ಗುರುತಿನ ಚೀಟಿಯನ್ನು ತಪಾಸಣಾ ಸಿಬ್ಬಂದಿಗಳಿಗೆ ತೋರಿಸಬೇಕು ಎಂದರು 

ಸಾಂಸದ ಜಿ.ಎಂ. ಸಿದ್ದೇಶ್ವರ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಶಾಸಕರುಗಳಾದ ಪ್ರೊ. ಲಿಂಗಣ್ಣ, ಎಸ್.ಎ. ರವೀಂದ್ರನಾಥ್, ಮಹಾನಗರಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವಿಜಯ ಮಹಾಂತೇಶ್ ಸೇರಿದಂತೆ ವಿವಿಧ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


  • ಹಾಲು, ಡೈರಿ ಹಾಗೂ ಹಾಲಿನ ಬೂತುಗಳು ಮತ್ತು ಮೊಟ್ಟೆ ಅಂಗಡಿಗಳು ಮಾತ್ರ ಪ್ರತಿದಿನ ಬೆಳಿಗ್ಗೆ 6:30ವರೆಗೂ ತೆರೆಯಲು ಅನುಮತಿ.
  • ಆರೋಗ್ಯ ಅಗತ್ಯಗಳಿಗೆ ವೈದ್ಯಕೀಯ ದಾಖಲೆಗಳು, ವೈದ್ಯ ಸಲಹಾ ಚೀಟಿ, ಆಸ್ಪತ್ರೆಯಲ್ಲಿ ದಾಖಲಾದ ವಿವರಗಳ ಋಜುವಾತಿನೊಂದಿಗೆ ಸಂಚರಿಸಬಹುದು
  • ಹೋಟೆಲ್ಗಳು ಪಾರ್ಸಲ್ ಸೇವೆಗಳನ್ನು ಗ್ರಾಹಕರ ಮನೆ ಬಾಗಿಲಿಗೆ ವಿತರಿಸಲು ಮಾತ್ರ ಅನುಮತಿ. ಗ್ರಾಹಕರಿಗೆ ಹೋಗಲು ಅವಕಾಶವಿಲ್ಲ.
  • ಔಷಧಿ ಅಂಗಡಿ, ಅಂಬುಲೆನ್ಸ್, ಅಗ್ನಿಶಾಮಕ, ಪೆಟ್ರೋಲ್ ಪಂಪ್, ಆಮ್ಲಜನಕ ಉತ್ಪಾದನಾ ಘಟಕ, ನೀರು, ನೈರ್ಮಲ್ಯ ಸೇವೆ ಇನ್ನಿತರ ಎಲ್ಲಾ ಅಗತ್ಯ ಸೇವೆಗಳಿಗೆ ಅವಕಾಶ 
  • ಹಾಪ್-ಕಾಮ್ಸ್ ಲಭ್ಯವಿಲ್ಲದಿರುವ ಪ್ರದೇಶಗಳಲ್ಲಿ ಸ್ಥಳೀಯವಾಗಿ ಸೀಮಿತ ಸಂಖ್ಯೆಯಲ್ಲಿ ತಳ್ಳುವ ಗಾಡಿಯ ಮೂಲಕ ಮನೆ ಬಾಗಿಲಿಗೆ ತರಕಾರಿ,ಹಣ್ಣು ಮಾರಾಟಕ್ಕೆ ಅನುಮತಿ.
  • ನಿರ್ಮಾಣ ಸ್ಥಳದಲ್ಲಿಯೇ ವಾಸವಾಗಿರುವ ಕಾರ್ಮಿಕರನ್ನು ಬಳಸಿಕೊಂಡು ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲು ಅನುಮತಿ
  • ಇ-ಕಾಮರ್ಸ್/ಹೋಮ್ ಡೆಲಿವರಿ ಸೇವೆಗಳ ಮುಖಾಂತರ ಎಲ್ಲಾ ವಸ್ತುಗಳನ್ನು ಮನೆಗೆ ಸರಬರಾಜು ಮಾಡಲು ಅನುಮತಿ.
  • ಕಿರಾಣಿ ಅಂಗಡಿಗಳು, ದಿನಸಿ, ಹಣ್ಣು ತರಕಾರಿಗಳು, ಮಾಂಸ ಮತ್ತು ಮೀನು, ಹಾಗೂ ಹಣ್ಣು ಮತ್ತು ತರಕಾರಿ ಮಾರುಕಟ್ಟೆ, ಮದ್ಯ, ಬಾರ್ ಸಂಪೂರ್ಣ ನಿಷೇಧ.

ಪದಗಂಟು :          
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©